ADVERTISEMENT

ಅಂಬೇಡ್ಕರ್‌ ಭಾವಚಿತ್ರದ ಪೋಸ್ಟರ್‌ ವಿವಾದ: ಪರಿಶಿಷ್ಟ ಜಾತಿಯ ಯುವಕನ ಹತ್ಯೆ

ಪಿಟಿಐ
Published 10 ಜೂನ್ 2021, 21:58 IST
Last Updated 10 ಜೂನ್ 2021, 21:58 IST

ಜೈಪುರ: ಮನೆಯ ಹೊರಗೆ ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರವುಳ್ಳ ಪೋಸ್ಟರ್‌ ಹಾಕಿದ್ದ ವಿಷಯಕ್ಕೆ ಸಂಬಂಧಿಸಿ ನಡೆದ ಜಗಳದಲ್ಲಿ ಪರಿಶಿಷ್ಟ ಜಾತಿಯ ಯುವಕನ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ರಾಜಸ್ಥಾನದ ಹನುಮಾನಗಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಭೀಮ್‌ ಆರ್ಮಿ ಸದಸ್ಯ ವಿನೋದ್ ಬಾಮ್ನಿಯಾ (22) ಹತ್ಯೆಯಾದವರು.

ಅನಿಲ್ ಸಿಹಾಗ್ ಮತ್ತು ರಾಕೇಶ್ ಸಿಹಾಗ್ ಅವರು ಮೇ 24 ರಂದು ವಿನೋದ್ ಬಾಮ್ನಿಯಾ ಅವರ ಮನೆಯ ಹೊರಗೆ ಹಾಕಿದ್ದ ಪೋಸ್ಟರ್ ಅನ್ನು ಹರಿದು ಹಾಕಿದ್ದರು. ಬಾಮ್ನಿಯಾ ಹಾಗೂ ಅವರ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದ ನಂತರ, ಸ್ಥಳೀಯರು ಮಧ್ಯಪ್ರವೇಶಿಸಿ ಜಗಳ ಬಗೆಹರಿಸಲು ಮುಂದಾಗಿದ್ದರು. ಹತ್ಯೆ ಮಾಡಿದ ಆರೋಪಿಗಳ ಕುಟುಂಬ ಸದಸ್ಯರು ಅದೇ ದಿನ ಅವರ ಪರವಾಗಿ ಕ್ಷಮೆಯಾಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅನಿಲ್‌ ಹಾಗೂ ರಾಕೇಶ್‌ ಇತರ ನಾಲ್ವರ ಬೆಂಬಲಿಗರೊಂದಿಗೆ ಜೂನ್ 5 ರಂದು ಬಾಮ್ನಿಯಾ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ವಿನೋದ್‌ ಬಾಮ್ನಿಯಾ ಚಿಕಿತ್ಸೆಗೆ ಸ್ಪಂದಿಸದೇ ಜೂನ್‌ 7 ರಂದು ಮೃತಪಟ್ಟಿದ್ದಾರೆ.

ADVERTISEMENT

ಆರೋಪಿಗಳಾದ ಅನಿಲ್ ಮತ್ತು ರಾಕೇಶ್, ಸ್ನೇಹಿತರಾದ ಸಾಕ್ಷಮ್ ಹಾಗೂ ಹೈದರ್ ಅಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.