ADVERTISEMENT

ದಲಿತ ಅಧಿಕಾರಿ ಮೇಲೆ ಹಲ್ಲೆ: ಜೈಲಿಂದ ಬಂದ ಬಿಜೆಪಿ ನಾಯಕನಿಗೆ ಭರ್ಜರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 11:37 IST
Last Updated 14 ಡಿಸೆಂಬರ್ 2025, 11:37 IST
<div class="paragraphs"><p>ಅಲಹಾಬಾದ್‌ ಹೈಕೋರ್ಟ್‌</p></div>

ಅಲಹಾಬಾದ್‌ ಹೈಕೋರ್ಟ್‌

   

ಬಲಿಯಾ: ಉತ್ತರ ಪ್ರದೇಶ ರಾಜ್ಯದಲ್ಲಿ ದಲಿತ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಬಿಜೆಪಿ ಮುಖಂಡ ಮುನ್ನಾ ಬಹದ್ದೂರ್‌ ಸಿಂಗ್‌ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಈ ವೇಳೆ ತಮ್ಮ ಊರಿನಲ್ಲಿ ಭರ್ಜರಿ ಸ್ವಾಗತ ಕೋರಲಾಗಿದೆ. ಆರೋಪಿಗೆ ಸ್ವಾಗತ ಕೋರಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ಜಿಲ್ಲಾ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ರಾಜ್ಯ ವಿದ್ಯುತ್‌ ನಿಗಮದ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಲಾಲ್‌ ಜಿ ಸಿಂಗ್‌ (ದಲಿತ ಅಧಿಕಾರಿ) ಅವರ ಮೇಲೆ ಮುನ್ನಾ ಬಹದ್ದೂರ್‌ ಸಿಂಗ್‌ ಆ. 23ರಂದು ಶೂನಿಂದ ಥಳಿಸಿದ್ದ.

ದೂರು ದಾಖಲಾಗಿದ್ದರಿಂದ ಸಿಂಗ್‌ನನ್ನು ಬಂಧಿಸಿದ್ದ ಪೊಲೀಸರು ಜಿಲ್ಲಾ ಕಾರಾಗೃಹಕ್ಕೆ ಕಳಿಸಿದ್ದರು.

ಅಲಹಾಬಾದ್‌ ಹೈಕೋರ್ಟ್‌ ಆದೇಶದ ಮೇರೆಗೆ ಜೈಲಿನಿಂದ ಶುಕ್ರವಾರ ಬಿಡುಗಡೆಗೊಂಡ ಮುನ್ನಾ ತನ್ನ ಬೆಂಗಾವಲು ಪಡೆಯೊಂದಿಗೆ ತವರು ಜಿಲ್ಲೆಗೆ ಮರಳುತ್ತಿದ್ದಂತೆ, ಅಪಾರ ಜನರು ಜಮಾಯಿಸಿ ಸ್ವಾಗತಿಸುವ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಘಟನೆ ನಡೆದ ಬೆನ್ನಿಗೆ, ಆರೋಪಿಗೆ ಜಾಮೀನು ಸಿಗುವ ಮುನ್ನವೇ ಬಿಜೆಪಿಯ ಕೆಲವು ಮುಖಂಡರು ಮುನ್ನಾನನ್ನು ಬೆಂಬಲಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳನ್ನು ಸಹ ಹಾಕಿದ್ದರು.

‘ತಮಗೆ ದೊರೆತ ಅಭೂತಪೂರ್ವ ಸ್ವಾಗತವು ಪಕ್ಷದ ಕಾರ್ಯಕರ್ತರು ನನ್ನ ಮೇಲಿಟ್ಟಿರುವ ಅಪಾರ ಪ್ರೀತಿ ಮತ್ತು ಬೆಂಬಲವನ್ನು ಪ್ರತಿಬಿಂಬಿಸುತ್ತದೆ’ ಎಂದು ಮುನ್ನಾ ಸಿಂಗ್‌ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.