ADVERTISEMENT

ಪರಿಶಿಷ್ಟ ಜಾತಿಯ ಪಂಚಾಯತ್ ಅಧ್ಯಕ್ಷೆ ಧ್ವಜಾರೋಹಣ ಮಾಡದಂತೆ ತಡೆಯೊಡ್ಡಿದ ಸ್ಥಳೀಯರು

ಪ್ರಜಾವಾಣಿ ವಿಶೇಷ
Published 20 ಆಗಸ್ಟ್ 2020, 14:26 IST
Last Updated 20 ಆಗಸ್ಟ್ 2020, 14:26 IST
ಅಮೃತಂ ಅವರು ಧ್ವಜಾರೋಹಣ ಮಾಡುತ್ತಿರುವುದು
ಅಮೃತಂ ಅವರು ಧ್ವಜಾರೋಹಣ ಮಾಡುತ್ತಿರುವುದು   

ಚೆನ್ನೈ: ಆಗಸ್ಟ್15ರಂದು ದೇಶದಾದ್ಯಂತ 74ನೇ ಸ್ವಾತಂತ್ರ್ಯೋತ್ಸವ ಆಚರಣೆ ಆಗಿದ್ದರೂ ತಮಿಳುನಾಡಿನ ತಿರುವಲ್ಲೂರ್ ಜಿಲ್ಲೆಯ ಆತುಪಾಕಂ ಎಂಬ ಗ್ರಾಮ ಪಂಚಾಯತ್‌ನಲ್ಲಿತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯೋತ್ಸವ ನಡೆದದ್ದು ಗುರುವಾರ. ಅಂದರೆ 5 ದಿನಗಳ ನಂತರ ಇಲ್ಲಿ ಸ್ವಾತಂತ್ರ್ಯೋತ್ಸವ ನಡೆದಿದೆ.

ಪಂಚಾಯತ್ ಅಧ್ಯಕ್ಷೆ ವಿ.ಅಮೃತಂ ಅವರು ಆಗಸ್ಟ್ 15ರಂದು ಧ್ವಜಾರೋಹಣ ಮಾಡಲು ಹೋದಾಗ ಕೆಲವು ಸ್ಥಳೀಯರು ಆಕೆಯನ್ನು ತಡೆದಿದ್ದರು. ಅಮೃತಂ ಪರಿಶಿಷ್ಟಜಾತಿಯವರಾಗಿದ್ದ ಕಾರಣ ಧ್ವಜಾರೋಹಣಕ್ಕೆಸ್ಥಳೀಯರುವಿರೋಧ ಸೂಚಿಸಿದ್ದರು.

ಈ ಸಂಗತಿ ಬೆಳಕಿಗೆ ಬಂದ ಕೂಡಲೇ ಕ್ರಮ ತೆಗೆದುಕೊಂಡ ತಿರುವಲ್ಲೂರ್ ಜಿಲ್ಲಾಡಳಿತ, ಪಂಚಾಯತ್ ಕಾರ್ಯದರ್ಶಿಯನ್ನು ವಜಾ ಮಾಡಿದೆ. ಧ್ವಜಾರೋಣಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪಂಚಾಯತ್ ಉಪಾಧ್ಯಕ್ಷೆಯ ಪತಿ ಮತ್ತು ಪಂಚಾಯತ್ ಕಾರ್ಯದರ್ಶಿಯನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಗುರುವಾರ ಪಂಚಾತ್ ಕಚೇರಿಯ ಆವರಣದಲ್ಲಿ ಅಮೃತಂ ಅವರು ಧ್ವಜಾರೋಹಣ ಮಾಡಿದ್ದು ಜಿಲ್ಲಾಧಿಕಾರಿ ಮಗೇಶ್ವರಿ ರವಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಪಿ. ಅರವಿಂದನ್ ಮತ್ತು ಜಿಲ್ಲಾಡಳಿತದಲ್ಲಿನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಮೊದಲ ಬಾರಿ ನಾನು ಸ್ವಾತಂತ್ರ್ಯದ ನಿಟ್ಟುಸಿರು ಬಿಟ್ಟಿದ್ದೇನೆ. ಜನರೇ ಆಯ್ಕೆ ಮಾಡಿದ್ದರೂ ನಾನು ಸ್ವಾತಂತ್ರ್ಯದಿನದಂದು ಧ್ವಜಾರೋಹಣ ಮಾಡುವುದಕ್ಕೆ ತಡೆಯೊಡ್ಡಲಾಯಿತು. ಇವತ್ತುನನಗೆ ಹೆಮ್ಮೆ ಮತ್ತು ಖುಷಿಯಾಗುತ್ತಿದೆ. ಈ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತಕ್ಕೆ ಧನ್ಯವಾದಗಳು ಎಂದು ಡೆಕ್ಕನ್ ಹೆರಾಲ್ಡ್ ಜತೆ ಮಾತನಾಡಿದ ಅಮೃತಂ ಹೇಳಿದ್ದಾರೆ.

ಗ್ರಾಮದಲ್ಲಿನ ಮೇಲ್ಜಾಜಿಯ ಕೆಲವು ಜನರು ನನಗೆ ತಡೆಯೊಡ್ಡಿದ್ದಾರೆ. ಪಂಚಾಯತ್ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷೆಯ ಪತಿ ನಾನು ಕಚೇರಿಗೆ ಬರುವಾಗಲೆಲ್ಲಾ ಅವಮಾನ ಮಾಡುತ್ತಾರೆ. ಟೆಂಡರ್ ಬಗ್ಗೆ ಅವರು ನನ್ನಲ್ಲಿ ಯಾವುದೇ ಮಾಹಿತಿ ಹಂಚಿಕೊಳ್ಳುವುದಿಲ್ಲ.ನಾನು ಜಾತಿ ನಿಂದನೆಗೊಳಗಾಗುತ್ತಲೇ ಇರುತ್ತೇನೆ ಎಂದಿದ್ದಾರೆ ಅಮೃತಂ.

ಇದೀಗ ಜಿಲ್ಲಾಧಿಕಾರಿ ಮಧ್ಯಪ್ರವೇಶ ಮಾಡಿರುವುದರಿಂದ ಯಾವುದೇ ಅಡೆತಡೆಯಿಲ್ಲದೆ ನನ್ನ ಜವಾಬ್ದಾರಿಗಳನ್ನು ನಿರ್ವಹಿಸುವ ಆತ್ಮವಿಶ್ವಾಸ ನನಗಿದೆ ಎಂದು ಅಮೃತಂ ಹೇಳಿದ್ದಾರೆ.

ಅದೇ ವೇಳೆ ಪರಿಶಿಷ್ಟ ಜಾತಿಗೆ ಸೇರಿದ ಅಧ್ಯಕ್ಷರ ವಿರುದ್ಧ ತಾರತಮ್ಯ ಮಾಡಲಾಗಿದೆಯೇ ಮತ್ತು ಅದರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಪರಿಶೀಲಿಸುವಂತೆ ಜಿಲ್ಲಾಡಳಿತಕ್ಕೆ ಜಿಲ್ಲಾಧಿಕಾರಿ ಮಾಗೇಶ್ವರಿ ರವಿಕುಮಾರ್ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.