ADVERTISEMENT

ಹುಟ್ಟುಹಬ್ಬದ ಪಾರ್ಟಿಯಲ್ಲಿ ವಿವಸ್ತ್ರಗೊಳಿಸಿ ಅವಮಾನ; ದಲಿತ ಬಾಲಕ ಆತ್ಮಹತ್ಯೆ

ಸಂಜಯ್ ಪಾಂಡೆ, ಲಖನೌ
Published 24 ಡಿಸೆಂಬರ್ 2024, 8:08 IST
Last Updated 24 ಡಿಸೆಂಬರ್ 2024, 8:08 IST
   

ಲಖನೌ: ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಜನ್ಮದಿನ ಆಚರಣೆಯೊಂದರಲ್ಲಿ ದಲಿತ ಬಾಲಕನೊಬ್ಬನ ಬಟ್ಟೆ ಬಿಚ್ಚಿಸಿ, ಥಳಿಸಿ, ಆತನ ಮೇಲೆ ಮೂತ್ರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯಿಂದಾಗಿ ಮನನೊಂದ ಬಾಲಕನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನು ಆತನ ಕೊಠಡಿಯಲ್ಲಿ ಸೋಮವಾರ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ, ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆತ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು ಎಂದು ವರದಿಗಳು ಹೇಳಿವೆ.

ಬಾಲಕನನ್ನು ಜನ್ಮದಿನಾಚರಣೆ ಪಾರ್ಟಿಗೆ ಕೆಲವು ಯುವಕರು ಶುಕ್ರವಾರ ಆಹ್ವಾನಿಸಿದ್ದರು. ಅಲ್ಲಿ ಪರಸ್ಪರರ ನಡುವೆ ಜಗಳ ನಡೆದಿದ್ದು, ಬಾಲಕನ ಬಟ್ಟೆ ಬಿಚ್ಚಿಸಿ, ಆತನ ಮೇಲೆ ದೈಹಿಕ ಹಲ್ಲೆ ನಡೆಸಿ, ಮೈಮೇಲೆ ಮೂತ್ರ ಮಾಡಲಾಯಿತು ಎಂದು ವರದಿಗಳು ಹೇಳಿವೆ. ಈ ಕೃತ್ಯಗಳನ್ನು ಯುವಕರು ಚಿತ್ರೀಕರಿಸಿಕೊಂಡಿದ್ದರು, ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡುವುದಾಗಿ ಬೆದರಿಸಿದ್ದರು. ದೃಶ್ಯಗಳನ್ನು ಡಿಲೀಟ್ ಮಾಡುವಂತೆ ಬಾಲಕ ಕೇಳಿಕೊಂಡಾಗ, ಆತ ಉಗುಳಿದ್ದನ್ನು ನೆಕ್ಕುವಂತೆ ಮಾಡಲಾಯಿತು ಎಂದು ಆರೋಪಿಸಲಾಗಿದೆ.

ADVERTISEMENT

ಬಾಲಕನು ನಡೆದ ಘಟನೆಯನ್ನು ತನ್ನ ಮನೆಯವರಿಗೆ ತಿಳಿಸಿದ್ದ. ಇದನ್ನು ಆಧರಿಸಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎನ್ನಲಾಗಿದೆ. 

ಇದರಿಂದಾಗಿ ಮನನೊಂದ ಬಾಲಕನು, ಮನೆಯವರು ಹೊರಗೆ ಹೋಗಿದ್ದ ಸಂದರ್ಭದಲ್ಲಿ ತನ್ನ ಕೊಠಡಿಯಲ್ಲಿ ನೇಣು ಹಾಕಿಕೊಂಡ ಎಂದು ವರದಿಯಾಗಿದೆ.

ಪೊಲೀಸರು ಕ್ರಮ ಕೈಗೊಳ್ಳದೆ ಇದ್ದುದೇ ಬಾಲಕನ ಸಾವಿಗೆ ಕಾರಣ ಎಂದು ದೂರಿರುವ ಆತನ ಕುಟುಂಬದ ಸದಸ್ಯರು ಹಾಗೂ ಇತರ ಕೆಲವರು, ಬಾಲಕನ ಮೃತದೇಹ ಇಟ್ಟುಕೊಂಡು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ, ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ನಾಲ್ಕನೇ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.