ADVERTISEMENT

ಮಲಿನ ಯಮುನೆಯಲ್ಲಿ ಮುಳುಗೆದ್ದರೆ ಆರೋಗ್ಯಕ್ಕೆ ಮುಳುವು!

29ರಂದು ‘ಯಮ ದ್ವಿತೀಯ’ ಅಂಗವಾಗಿ ಪುಣ್ಯಸ್ನಾನ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 14:48 IST
Last Updated 26 ಅಕ್ಟೋಬರ್ 2019, 14:48 IST
ಕೈಗಾರಿಕೆಗಳ ತ್ಯಾಜ್ಯವೇ ತುಂಬಿರುವ ಯಮುನಾ ನದಿಯಲ್ಲಿ ವ್ಯಕ್ತಿಯೊಬ್ಬರು ಧಾರ್ಮಿಕ ವಿಧಿಯೊಂದರಲ್ಲಿ ತೊಡಗಿದ್ದಾರೆ
ಕೈಗಾರಿಕೆಗಳ ತ್ಯಾಜ್ಯವೇ ತುಂಬಿರುವ ಯಮುನಾ ನದಿಯಲ್ಲಿ ವ್ಯಕ್ತಿಯೊಬ್ಬರು ಧಾರ್ಮಿಕ ವಿಧಿಯೊಂದರಲ್ಲಿ ತೊಡಗಿದ್ದಾರೆ   

ಲಖನೌ: ‘ಯಮ ದ್ವಿತೀಯ’ ಆಚರಣೆ ಅಂಗವಾಗಿ ಅ.29ರಂದು ಯಮುನಾ ನದಿಯಲ್ಲಿ ಪುಣ್ಯಸ್ನಾನ ಮಾಡಲು ಲಕ್ಷಾಂತರ ಜನರು ಮಥುರಾದತ್ತ ಹೊರಡಲು ಸಜ್ಜಾಗಿದ್ದಾರೆ. ಆದರೆ, ವಿಪರೀತವಾಗಿ ಕಲುಷಿತಗೊಂಡಿರುವ ಯಮುನಾ ನದಿಯಲ್ಲಿ ಮುಳುಗೇಳುವವರಿಗೆ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುವುದು ನಿಶ್ಚಿತ ಎಂದು ತಜ್ಞವೈದ್ಯರು ಎಚ್ಚರಿಸಿದ್ದಾರೆ.

ಯಮುನಾ, ಮೃತ್ಯುವಿನ ಅಧಿಪ‍ತಿ ಯಮರಾಜನ ಸಹೋದರಿ ಎಂಬ ನಂಬಿಕೆ ಇದೆ. ದೀಪಾವಳಿ ಅಮಾವಾಸ್ಯೆ ನಂತರದ ಬಿದಿಗೆಯನ್ನು (ದ್ವಿತೀಯ ದಿನ) ‘ಯಮ ದ್ವಿತೀಯ’ ಎನ್ನಲಾಗುತ್ತಿದ್ದು, ಅಂದು ಯಮುನಾ ನದಿಯಲ್ಲಿ ಸ್ನಾನ ಮಾಡಿದರೆ ಯಮನ ವಕ್ರದೃಷ್ಟಿಯಿಂದ ಪಾರಾಗಬಹುದು ಎಂಬ ನಂಬಿಕೆಯೂ ಇದೆ.

ಕೆಲವು ದಿನಗಳ ಹಿಂದೆ ನೂರಾರು ಜನ ಮಹಿಳೆಯರು ಮಥುರಾಕ್ಕೆ ಭೇಟಿ ನೀಡಿದ್ದ ವೇಳೆ, ಯಮುನಾ ನದಿ ನೀರನ್ನು ಪೂಜೆಗೆ ಬಳಸಿ, ತುಸು ನೀರನ್ನು ಕುಡಿದಿದ್ದಾರೆ. ನಂತರ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಕೆಲವರಿಗೆ ಈಗಲೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ADVERTISEMENT

‘ದೆಹಲಿ, ಮಥುರಾ ಹಾಗೂ ವೃಂದಾವನ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಯಮುನಾ ನದಿ ಭಾರಿ ಪ್ರಮಾಣದಲ್ಲಿ ಮಲಿನಗೊಂಡಿದೆ. ಈ ನೀರು ನೀರಾವರಿಯೂ ಯೋಗ್ಯವಲ್ಲ. ಇನ್ನು, ಸ್ನಾನ ಮಾಡಿದರೆ, ಕುಡಿದರೆ ಆರೋಗ್ಯ ಹದಗೆಡುವುದು ಖಾತರಿ’ ಎಂದು ಸೌತ್‌ ಏಷ್ಯನ್‌ ನೆಟ್‌ವರ್ಕ್‌ ಆನ್‌ ಡ್ಯಾಮ್ಸ್‌, ರಿವರ್ಸ್‌ ಆ್ಯಂಡ್‌ ಪೀಪಲ್‌ನ ಸಮನ್ವಯಾಧಿಕಾರಿ ಹಿಮಾಂಶು ಠಕ್ಕರ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡುತ್ತಾ ತಿಳಿಸಿದರು.

‘ಈ ನದಿ ನೀರಿನ ಬಳಕೆಯಿಂದ ಪ್ರಮುಖವಾಗಿ ಚರ್ಮ ಹಾಗೂ ಜೀರ್ಣಾಂಗ ವ್ಯೂಹಕ್ಕೆ ಸಂಬಂಧಿಸಿದ ತೊಂದರೆಗಳು ಬಾಧಿಸುತ್ತವೆ. ಕೆಲವು ದೀರ್ಘಾವಧಿ ಕಾಯಿಲೆಗಳೂ ಕಾಣಿಸಿಕೊಳ್ಳುತ್ತವೆ’ ಎಂದೂ ಠಕ್ಕರ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.