ADVERTISEMENT

ಬಿಜೆಪಿ ವಿರುದ್ಧ ಬೀದಿಗಿಳಿಯಬೇಕು

ಕಾಂಗ್ರೆಸ್‌ ಕಾರ್ಯಕರ್ತರಿಗೆ ಸೋನಿಯಾ ಕರೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 19:45 IST
Last Updated 12 ಸೆಪ್ಟೆಂಬರ್ 2019, 19:45 IST
   

ನವದೆಹಲಿ:‘ಬಿಜೆಪಿಯು ತನಗೆ ದೊರೆತಿರುವ ಬಹುಮತವನ್ನು ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿಯ ದುಷ್ಟ ಕಾರ್ಯಸೂಚಿಯನ್ನು ಬಯಲಿಗೆ ಎಳೆಯಲು ನಾವು ಚಳವಳಿ ಹುಟ್ಟುಹಾಕಬೇಕು’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ.

ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನಾಚರಣೆಗೆ ಸಂಬಂಧಿಸಿದಂತೆ ಚರ್ಚಿಸಲು ಪಕ್ಷದ ಕೇಂದ್ರಕಚೇರಿಯಲ್ಲಿ ಗುರುವಾರ ಕರೆದಿದ್ದ ಸಭೆಯಲ್ಲಿ ಅವರು ಈ ಮಾತು ಹೇಳಿದ್ದಾರೆ.

‘ಪ್ರಜಾಪ್ರಭುತ್ವವು ಈ ಹಿಂದೆ ಎಂದೂ ಇಷ್ಟು ಅಪಾಯದಲ್ಲಿ ಇರಲಿಲ್ಲ. ಸಂಯಮದಿಂದ ಇರಬೇಕು ಎಂಬ ನಮ್ಮ ದೃಢನಿಶ್ಚಯವನ್ನು ಬಿಜೆಪಿ ಪರೀಕ್ಷಿಸುತ್ತಲೇ ಇದೆ. ನಾವು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದರೆ ಸಾಲದು. ಜನರ ಬಳಿ ಹೋಗಬೇಕು. ನಾವು ಧೈರ್ಯವಾಗಿ ಬೀದಿಗೆ ಇಳಿದು ಹೋರಾಡಬೇಕು. ಹಳ್ಳಿಹಳ್ಳಿಗಳಲ್ಲಿ ಹೋರಾಡಬೇಕು. ಪಟ್ಟಣ–ನಗರಗಳಲ್ಲಿ ಹೋರಾಡಬೇಕು’ ಎಂದು ಅವರು ಕರೆ ನೀಡಿದ್ದಾರೆ.

ADVERTISEMENT

‘ದೇಶದ ಆರ್ಥಿಕ ಪರಿಸ್ಥಿತಿ ದಿನೇದಿನೇ ಹದಗೆಡುತ್ತಲೇ ಇದೆ. ಉದ್ಯೋಗಗಳು ನಷ್ಟವಾಗುತ್ತಲೇ ಇವೆ. ಜನರ ವಿಶ್ವಾಸವೂ ಕುಗ್ಗುತ್ತಿದೆ. ಹೂಡಿಕೆದಾರರ ವಿಶ್ವಾಸವೂ ಕಡಿಮೆಯಾಗುತ್ತಿದೆ. ಆದರೆ ಏನು ಮಾಡಬೇಕು ಎಂಬುದರ ಬಗ್ಗೆ ಸರ್ಕಾರಕ್ಕೆ ಸುಳಿವೇ ಇಲ್ಲ.ಆದರೆ ಇದರಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿಯು ದ್ವೇಷರಾಜಕಾರಣದ ಮೊರೆ ಹೋಗಿದೆ’ ಎಂದು ಸೋನಿಯಾ ಆರೋಪಿಸಿದ್ದಾರೆ.

‘ಬಿಜೆಪಿಯು ಮಹಾತ್ಮ ಗಾಂಧಿ ಸರ್ದಾರ್ ವಲ್ಲಭಭಾಯ್‌ ಪಟೇಲ್ ಮತ್ತು ಡಾ.ಬಿ.ಆರ್. ಅಂಬೇಡ್ಕರ್‌ ಅವರಂತಹ ಮಹಾನ್ ನಾಯಕರ ಸಂದೇಶಗಳನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿಯು ತನ್ನದುಷ್ಟ ಕಾರ್ಯಸೂಚಿಯನ್ನು ಪ್ರಸರಿಸಲು ಇಂತಹ ನಾಯಕರ ಸಂದೇಶಗಳನ್ನು ತಪ್ಪಾಗಿ ಅರ್ಥೈಸುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ರಾಜ್ಯಗಳಲ್ಲಿನ ಕಾಂಗ್ರೆಸ್‌ ಶಾಸಕಾಂಗ ಸಭೆಯ ನಾಯಕರು ಈ ಸಭೆಯಲ್ಲಿ ಭಾಗಿಯಾಗಿದ್ದರು.

***

‘ನಮ್ಮ ಆರ್ಥಿಕತೆಯ ಕುಂಠಿತ ಬೆಳವಣಿಗೆಯು ವಿಸ್ತರಿಸುತ್ತಲೇ ಇದೆ. ದಿನೇದಿನೇ ಹದಗೆಡುತ್ತಲೇ ಇದೆ. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ಕೆಡಲಿದೆ’
– ಮನಮೋಹನ್ ಸಿಂಗ್, ಮಾಜಿ ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.