ADVERTISEMENT

ಆರ್‌ಎಸ್‌ಎಸ್‌ನ ನೂತನ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 8:59 IST
Last Updated 20 ಮಾರ್ಚ್ 2021, 8:59 IST
ದತ್ತಾತ್ರೇಯ ಹೊಸಬಾಳೆ
ದತ್ತಾತ್ರೇಯ ಹೊಸಬಾಳೆ    

ಬೆಂಗಳೂರು:ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ನೂತನ ‘ಸರಕಾರ್ಯವಾಹ’ಆಗಿ ದತ್ತಾತ್ರೇಯ ಹೊಸಬಾಳೆ ಅವರು ಶನಿವಾರ ಚುನಾಯಿತರಾಗಿದ್ದಾರೆ.

ಮಾಗಡಿ ರಸ್ತೆಯ ಚನ್ನೇನಹಳ್ಳಿಯಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್‌ನಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ (ಎಬಿಪಿಎಸ್) ಈ ಆಯ್ಕೆ ನಡೆದಿದೆ. ಹೊಸಬಾಳೆ ಅವರು ಈವರೆಗೆ ಆರ್‌ಎಸ್‌ಎಸ್‌ನ ಸಹ ಸರಕಾರ್ಯವಾಹರಾಗಿದ್ದರು.

ದತ್ತಾತ್ರೇಯ ಹೊಸಬಾಳೆ ಪರಿಚಯ: ದತ್ತಾತ್ರೇಯ ಹೊಸಬಾಳೆ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮದವರು. ದತ್ತಾಜಿ ಎಂದೇ ಸಂಘದ ವಲಯದಲ್ಲಿ ಅವರನ್ನು ಗುರುತಿಸಿಕೊಂಡಿದ್ದಾರೆ. 1954ರ ಡಿ. ‌1ರಂದು ಜನಿಸಿದ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಸಾಗರದಲ್ಲಿ ಪಡೆದರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪಡೆದರು. ಅಲ್ಲಿ ಎಚ್. ನರಸಿಂಹಯ್ಯ ಅವರ ಒಡನಾಟ ಮತ್ತು ಮಾರ್ಗದರ್ಶನ ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ADVERTISEMENT

1968ರಲ್ಲಿ ಅವರು ಆರ್‌ಎಸ್‌ಎಸ್‌ಪ್ರವೇಶಿಸಿದ್ದರು. 1972ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಸದಸ್ಯರಾಗಿ, ಬಳಿಕ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ 15 ವರ್ಷ ಕೆಲಸ ಮಾಡಿದ್ದಾರೆ. ಸಂಘಟನೆ, ಸಾಮಾಜಿಕ ಸಮರಸತೆ, ಸಾಹಿತ್ಯ ಮತ್ತು ಕಲೆ ಹೊಸಬಾಳೆಯವರ ಆಸಕ್ತಿಯ ಕ್ಷೇತ್ರಗಳು. ಉತ್ತಮ ವಾಗ್ಮಿಗಳು, ಸಂಘಟನಾಕಾರರು ಆಗಿರುವ ಅವರು ಹಲವು ಲೇಖನಗಳನ್ನು ಬರೆದಿದ್ದಾರೆ.

ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಹೊಸಬಾಳೆಯವರು ಒಂದು ವರ್ಷಕ್ಕೂ ಹೆಚ್ಚು ಕಾಲ ಮೀಸಾ ಬಂಧನಕ್ಕೆ ಒಳಗಾಗಿದ್ದರು, ನಂತರದ ದಿನಗಳಲ್ಲಿ ಆರ್‌ಎಸ್‌ಎಸ್‌ಹೊ ವೆ ಶೇಷಾದ್ರಿ ಅವರು ತುರ್ತು ಪರಿಸ್ಥಿತಿಯ ಕುರಿತಾದ ‘ಭುಗಿಲು’ ಪುಸ್ತಕದ ಕೆಲಸದಲ್ಲಿಕಾರ್ಯ ನಿರ್ವಹಿಸಿದ್ದಾರೆ.

ವಿದ್ಯಾರ್ಥಿಗಳ ಅಂತರರಾಷ್ಟ್ರೀಯ ಸಂಘಟನೆಯಾದ ‘ವೋಸಿ’ (World Organization for Student and Youth) ಹಾಗೂ ಇನ್ನಿತರ ಸಂಘಟನೆಗಳಲ್ಲಿ ಕೆಲಸ ಮಾಡಿರುವವರು, ಕನ್ನಡದ ಮಾಸ ಪತ್ರಿಕೆ ‘ಅಸೀಮಾ‘ ದ ಸಂಸ್ಥಾಪಕರು. 2004ರಲ್ಲಿಮಾತೃ ಸಂಘಟನೆಯಾದ ಆರ್‌ಎಸ್‌ಎಸ್‌ಗೆಮರಳಿದ ಅವರು, ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ್ ಹೊಣೆ ಹೊತ್ತರು. ಬಳಿಕ ಆರ್‌ಎಸ್‌ಎಸ್‌ನಸಹ ಸರಕಾರ್ಯವಾಹರಾಗಿ ನೇಮಕ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.