ADVERTISEMENT

ಐಪಿಎಸ್ ಮಗಳಿಗೆ ಪ್ರತಿನಿತ್ಯ ಡಿಸಿಪಿ ಅಪ್ಪನ ಸಲ್ಯೂಟ್

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2018, 12:09 IST
Last Updated 4 ಸೆಪ್ಟೆಂಬರ್ 2018, 12:09 IST
   

ಹೈದರಾಬಾದ್‌: ಮಗಳು ಐಪಿಎಸ್‌ ಅಧಿಕಾರಿ, ತಂದೆ ಮೂರು ದಶಕಗಳಿಂದ ಪೊಲೀಸ್‌ ಇಲಾಖೆಯಲ್ಲಿಯೇ ಅಧಿಕಾರಿ, ಎಲ್ಲಿಯೇ ಮಗಳು ಎದುರಾದರೂ ಅತ್ಯಂತ ಗೌರವದಿಂದ ಎದೆಯುಬ್ಬಿಸಿ ಸಲ್ಯೂಟ್‌ ಮಾಡುವುದೇ ನನಗೆ ಹೆಮ್ಮೆ...

ಇದು ಹೈದರಾಬಾದ್‌ ಪೊಲೀಸ್‌ ಇಲಾಖೆಯಲ್ಲಿ ಡಿಸಿಪಿ ಆಗಿರುವ ಎ.ಆರ್‌.ಉಮಾಮಹೇಶ್ವರ ಶರ್ಮಾ ಅವರ ನುಡಿಗಳು...

ಎ.ಆರ್‌.ಉಮಾಮಹೇಶ್ವರ ಶರ್ಮಾ ಅವರ ಪುತ್ರಿಯೇ ಸಿಂಧು ಶರ್ಮಾ. ಇವರು ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ. 2014ರಲ್ಲಿ ಐಪಿಎಸ್‌ ಅಧಿಕಾರಿಯಾಗಿ ಹೊರಹೊಮ್ಮಿದರು.

ಪ್ರಸ್ತುತ ಉಮಾಮಹೇಶ್ವರ್ ಅವರು ಹೈದರಾಬಾದಿನ ರಾಚಕೊಂಡದ ಮಲಕಗಿರಿಯಲ್ಲಿ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ವರ್ಷ ನಿವೃತ್ತಿಯಾಗಲಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ವೃತ್ತಿ ಬದುಕು ಆರಂಭಿಸಿದ ಶರ್ಮಾ ಅವರಿಗೆ ಇತ್ತೀಚೆಗೆ ಐಪಿಎಸ್ ದರ್ಜೆ ನೀಡಲಾಗಿದೆ.

ತೆಲಂಗಾಣ ರಾಷ್ಟ್ರೀಯ ಸಮಿತಿಯು ಕೊಂಗಾರ ಕಲನ್‌ ಹೊರವಲಯದಲ್ಲಿ ಭಾನುವಾರ ಸಾರ್ವಜನಿಕ ಸಭೆ ಏರ್ಪಡಿಸಿತ್ತು. ಈ ಸಭೆಯಲ್ಲಿ ಮಗಳ ಜತೆ ಇದೇ ಮೊದಲ ಬಾರಿಗೆ ಕರ್ತವ್ಯನಿರತನಾದೆ. ಅವಳ ಜತೆ ಕಾರ್ಯನಿರ್ವಹಿಸುವ ಅವಕಾಶ ದೊರೆತಿದ್ದು ನನ್ನ ಅದೃಷ್ಟ ಎಂದು ಉಮಾಮಹೇಶ್ವರ್ ಹೇಳಿಕೊಂಡಿದ್ದಾರೆ.

ಮಗಳು ನನ್ನ ಹಿರಿಯ ಅಧಿಕಾರಿ. ಅವಳನ್ನು ಕಂಡಾಗಲೆಲ್ಲಾ ನಾನು ಸಲ್ಯೂಟ್ ಮಾಡುತ್ತೇನೆ. ನಾವು ನಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದೇವೆ. ನನಗೆ ಅವಳೊಟ್ಟಿಗೆ ಕರ್ತವ್ಯ ನಿರ್ವಹಿಸಲು ತುಂಬಾ ಸಂತೋಷವಾಗುತ್ತದೆ. ಆದರೆ ಏನೇ ಆದರೂ ಮನೆಯಲ್ಲಿ ನಾನು ಅವಳಿಗೆ ಅಪ್ಪ. ಅವಳು ನನಗೆ ಮಗಳು ಎಂದು ಹೆಮ್ಮೆಯ ಮಾತನಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.