ADVERTISEMENT

ದೆಹಲಿ ಮಹಿಳಾ ಆಯೋಗ ಮುಖ್ಯಸ್ಥೆ ಮನೆಗೆ ನುಗ್ಗಿದ ವ್ಯಕ್ತಿ ವಶಕ್ಕೆ

ಪಿಟಿಐ
Published 17 ಅಕ್ಟೋಬರ್ 2022, 19:30 IST
Last Updated 17 ಅಕ್ಟೋಬರ್ 2022, 19:30 IST
ಸ್ವಾತಿ ಅವರ ಕಾರಿನ ಮುಂದಿನ ಗಾಜು ಒಡೆದಿರುವುದು –ಪಿಟಿಐ ಚಿತ್ರ
ಸ್ವಾತಿ ಅವರ ಕಾರಿನ ಮುಂದಿನ ಗಾಜು ಒಡೆದಿರುವುದು –ಪಿಟಿಐ ಚಿತ್ರ   

ನವದೆಹಲಿ: ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲೀವಾಲ್‌ ಅವರ ಮನೆಗೆ ನುಗ್ಗಿ, ಅವರ ಹಾಗೂ ಅವರ ತಾಯಿಯ ಕಾರುಗಳಿಗೆ ಹಾನಿ ಮಾಡಿದ್ದ 30 ವರ್ಷದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸೋಮವಾರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಸೋಮವಾರದಂದು ಸ್ವಾತಿ ಅವರು ಮನೆಯಲ್ಲಿ ಇರಲಿಲ್ಲ. ಈ ದಿನ ಬೆಳಿಗ್ಗೆ ಸುಮಾರಿಗೆ ವ್ಯಕ್ತಿಯು ಅವರ ಮನೆಗೆ ನುಗ್ಗಿ, ಕಾರುಗಳಿಗೆ ಹಾನಿ ಉಂಟುಮಾಡಿದ್ದರು. ಘಟನೆಯು ಬಹಳ ಕಳವಳಕಾರಿಯಾಗಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಸ್ವಾತಿ ಅವರು ದೆಹಲಿ ಪೊಲೀಸ್‌ ವರಿಷ್ಠಾಧಿಕಾರಿ ಸಂಜಯ್‌ ಅರೋರಾ ಅವರಿಗೆ ಮನವಿ ಮಾಡಿದ್ದರು.

‘ವ್ಯಕ್ತಿಯನ್ನು ನಾಥುಪುರ ನಿವಾಸಿ ಸಚಿನ್‌ ಎಂದು ಗುರುತಿಸಲಾಗಿದೆ. ಅವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ, ಅವರನ್ನು ಇನ್‌ಸ್ಟಿಟ್ಯೂಟ್‌ ಆಫ್‌ ಹ್ಯೂಮನ್‌ ಬಿಹೇವಿಯರ್‌ ಆ್ಯಂಡ್‌ ಅಲೈಡ್‌ ಸೈನ್ಸ್‌ಗೆ (ಐಎಚ್‌ಬಿಎಎಸ್‌) ಸೇರಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

‘ವ್ಯಕ್ತಿಯ ವಿರುದ್ಧ ಅತಿಕ್ರಮಣ ಮತ್ತು ವೈಯಕ್ತಿಕ ಆಸ್ತಿ ಹಾನಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದರು.

‘ಕಳೆದ ಹಲವು ತಿಂಗಳಿನಿಂದ ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಆದ್ದರಿಂದ ಈ ಕುರಿತು ಕ್ರಮ ಕೈಗೊಳ್ಳಬೇಕು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರನ್ನು ಆಗ್ರಹಿಸಿದ್ದಾರೆ.

‘ಬೆದರಿಸುವ ತಂತ್ರ’
‘ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಹಲವು ನಿಷ್ಠುರ ಕ್ರಮಗಳ್ನು ಕೈಗೊಂಡಿದ್ದೇನೆ. ಆದ್ದರಿಂದ ಈ ಘಟನೆಯು ನನ್ನನ್ನು ಬೆದರಿಸುವ ತಂತ್ರವಾಗಿರಬಹುದು’ ಎಂದು ಅರೋರಾ ಅವರಿಗೆ ಬರೆದ ಪತ್ರದಲ್ಲಿ ಸ್ವಾತಿ ಹೇಳಿದ್ದಾರೆ.

‘ಯಾವುದೇ ಬೆದರಿಕೆ ಅಥವಾ ದಾಳಿಯು ಕರ್ತವ್ಯ ನಿರ್ವಹಿಸುವುದರಿಂದ ನನ್ನನ್ನು ತಡೆಲು ಸಾಧ್ಯವಿಲ್ಲ. ಮಹಿಳೆಯ ಹಕ್ಕಿನ ಪರವಾಗಿ ನಿರ್ಭೀತವಾಗಿ ನಾನು ನನ್ನ ಕೆಲಸವನ್ನು ಮುಂದುವರೆಸುತ್ತೇನೆ’ ಎಂದೂ ಅವರು ಹೇಳಿದ್ದಾರೆ.

ಹಲವು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಎದುರಿಸುತ್ತಿರುವ ಸಾಜಿದ್‌ ಖಾನ್‌ ಅವರನ್ನು ರಿಯಾಲಿಟ್‌ ಶೋವೊಂದರಿಂದ ಹೊರಗೆ ಕಳುಹಿಸಬೇಕು ಎಂದು ಸ್ವಾತಿ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಅವರನ್ನು ಆಗ್ರಹಿಸಿದ್ದರು. ಇದಾದ ಬಳಿಕ, ‘ನಿಮ್ಮನ್ನು ಅತ್ಯಾಚಾರ ಮಾಡುವುದಾಗಿ’ ಸ್ವಾತಿ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಹಲವು ಬೆದರಿಕೆಗಳು ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.