ADVERTISEMENT

ಹೈದರಾಬಾದ್‌: ಹಲ್ಲೆ ಖಂಡಿಸಿ ವೈದ್ಯರ ಮುಷ್ಕರ

ಕೋವಿಡ್‌–19 ರೋಗಿ ಸಾವು, ವೈದ್ಯರ ಮೇಲೆ ಸಂಬಂಧಿಕರಿಂದ ಹಲ್ಲೆ

ಪಿಟಿಐ
Published 10 ಜೂನ್ 2020, 12:36 IST
Last Updated 10 ಜೂನ್ 2020, 12:36 IST
ಹೈದರಾಬಾದ್‌ನಲ್ಲಿ ಕೋವಿಡ್‌‌–19ನಿಂದ ಮೃತಪಟ್ಟ ರೋಗಿಯೊಬ್ಬರ ಸಂಬಂಧಿಕರು ವೈದ್ಯಕೀಯ ಸಿಬ್ಬಂದಿ ಮೇಲೆ ನಡೆಸಿದ್ದ ಹಲ್ಲೆಯನ್ನು ವಿರೋಧಿಸಿ ಬುಧವಾರ ಸರ್ಕಾರಿ ಗಾಂಧಿ ಸಾರ್ವಜನಿಕ ಆಸ್ಪತ್ರೆಯ ಕಿರಿಯ ವೈದ್ಯರು ಪ್ರತಿಭಟನೆ ನಡೆಸಿದರು –ಎಎಫ್‌ಪಿ ಚಿತ್ರ 
ಹೈದರಾಬಾದ್‌ನಲ್ಲಿ ಕೋವಿಡ್‌‌–19ನಿಂದ ಮೃತಪಟ್ಟ ರೋಗಿಯೊಬ್ಬರ ಸಂಬಂಧಿಕರು ವೈದ್ಯಕೀಯ ಸಿಬ್ಬಂದಿ ಮೇಲೆ ನಡೆಸಿದ್ದ ಹಲ್ಲೆಯನ್ನು ವಿರೋಧಿಸಿ ಬುಧವಾರ ಸರ್ಕಾರಿ ಗಾಂಧಿ ಸಾರ್ವಜನಿಕ ಆಸ್ಪತ್ರೆಯ ಕಿರಿಯ ವೈದ್ಯರು ಪ್ರತಿಭಟನೆ ನಡೆಸಿದರು –ಎಎಫ್‌ಪಿ ಚಿತ್ರ    

ಹೈದರಾಬಾದ್‌: ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯಲ್ಲಿ ಕೋವಿಡ್‌–19ನಿಂದ ಮೃತಪಟ್ಟ ರೋಗಿಯ ಸಂಬಂಧಿಕರೊಬ್ಬರು ವೈದ್ಯರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರು ಬುಧವಾರವೂ ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ.

ಮಂಗಳವಾರ ರಾತ್ರಿ ವೈದ್ಯರು ಮತ್ತು ಇತರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ: ‘ಕೋವಿಡ್‌–19 ರೋಗಿಯೊಬ್ಬರು ಆಸ್ಪತ್ರೆಯ ಶೌಚಾಲಯಕ್ಕೆ ತೆರಳಿದ್ದಾಗ ಕುಸಿದು ಬಿದ್ದಿದ್ದರು. ಈ ವೇಳೆ ವೈದ್ಯರ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಸಾವನ್ನಪ್ಪಿದ್ದರು. ಈ ವಿಷಯವನ್ನು ವೈದ್ಯರು ರೋಗಿಯ ಸಂಬಂಧಿಕರಿಗೆ ವಿವರಿಸುತ್ತಿರುವಾಗ ಸಂಬಂಧಿಕರು ವೈದ್ಯರ ಮೇಲೆ ಕಬ್ಬಿಣದ ಕುರ್ಚಿ ಎಸೆದು ಹಲ್ಲೆ ಮಾಡಿದರು’ ಎಂದು ಪ್ರತಿಭಟನನಿರತ ವೈದ್ಯರೊಬ್ಬರು ತಿಳಿಸಿದ್ದಾರೆ.

ADVERTISEMENT

‘ಸಾಮಾನ್ಯವಾಗಿ ಕೋವಿಡ್‌–19 ರೋಗಿಗಳ ಸಂಬಂಧಿಕರಿಗೆ ಭೇಟಿ ನೀಡಲು ಆಸ್ಪತ್ರೆಯಲ್ಲಿ ಅವಕಾಶ ನೀಡುವುದಿಲ್ಲ. ಆದರೆ, ರೋಗಿಯ ಸಂಬಂಧಿಕರು ವೈದ್ಯರು ಮತ್ತು ಇತರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದರು.

ಪ್ರತಿಭಟನೆ ಕೈಬಿಡುವಂತೆ ಕಿರಿಯ ವೈದ್ಯರಿಗೆ ಮನವಿ ಮಾಡಿರುವ ತೆಲಂಗಾಣದ ಆರೋಗ್ಯ ಸಚಿವರು, ಈ ವಿಷಯ ಕುರಿತು ಚರ್ಚಿಸಲು ವೈದ್ಯಕೀಯ ಪ್ರತಿನಿಧಿಗಳನ್ನು ಆಹ್ವಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.