ADVERTISEMENT

ಮರಣದಂಡನೆ ಜಾರಿ ಮಾರ್ಗಸೂಚಿ: ಅಕ್ಟೋಬರ್‌ 8ಕ್ಕೆ ಕೇಂದ್ರದ ಅರ್ಜಿ ವಿಚಾರಣೆ

ಪಿಟಿಐ
Published 24 ಸೆಪ್ಟೆಂಬರ್ 2025, 16:00 IST
Last Updated 24 ಸೆಪ್ಟೆಂಬರ್ 2025, 16:00 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಮರಣ ದಂಡನೆ ವಿಧಿಸಬಹುದಾದ ಘೋರ ಪ್ರಕರಣಗಳಲ್ಲಿ ‘ಸಂತ್ರಸ್ತ (ಬಲಿಪಶು) ಮತ್ತು ಸಮಾಜ ಕೇಂದ್ರಿತ‘ವಾದ ಮಾರ್ಗಸೂಚಿಯನ್ನು ರೂಪಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಅಕ್ಟೋಬರ್‌ 8ರಂದು  ವಿಚಾರಣೆ ನಡೆಸಲಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್‌, ಸಂದೀಪ್‌ ಮೆಹ್ತಾ ಮತ್ತು ಎನ್‌.ವಿ.ಅಂಜಾರಿಯಾ ಅವರು ಇರುವ ಪೀಠದ ಮುಂದೆ ಅರ್ಜಿ ವಿಚಾರಣೆಗೆ ಬರಲಿದೆ.

ಸದ್ಯ ಜಾರಿಯಲ್ಲಿರುವ ಮಾರ್ಗಸೂಚಿಯು ‘ಆರೋಪಿ ಮತ್ತು ಅಪರಾಧಿ’ ಕೇಂದ್ರಿತವಾಗಿದೆ ಎಂದು 2020ರ ಜನವರಿಯಲ್ಲಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್‌, 2014ರಲ್ಲಿ ಮರಣ ದಂಡನೆಗೆ ಗುರಿಯಾದ ಶತೃಘನ್‌ ಚವಾಣ್‌ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದ ಅರ್ಜಿದಾರರ ಅಭಿಪ್ರಾಯ ಕೇಳಿತ್ತು. ಇದೇ ಪ್ರಕರಣದಲ್ಲಿ ಅಂದು ಮಾರ್ಗಸೂಚಿ ರಚನೆಯಾಗಿತ್ತು.

ADVERTISEMENT

ಕೇಂದ್ರ ಸರ್ಕಾರದ ಅರ್ಜಿ ಸಂಬಂಧ ಕೈಗೊಳ್ಳುವ ತೀರ್ಮಾನವು ಚವ್ಹಾಣ್‌ ಪ್ರಕರಣದಲ್ಲಿ ವಿಧಿಸಿರುವ ಶಿಕ್ಷೆ ಮತ್ತು ದಂಡನೆಯ ಬದಲಾವಣೆಗೆ ಅನ್ವಯ ಆಗದು. ಈ ಪ್ರಕರಣದಲ್ಲಿ ಪುನರ್‌ ಪರಿಶೀಲನೆ ಮತ್ತು ಪರಿಹಾರ ಅರ್ಜಿ ಎರಡನ್ನೂ ಈಗಾಗಲೇ ವಜಾ ಮಾಡಿದ್ದು, ಅಂತಿಮ ಹಂತ ದಾಟಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.

‘ನ್ಯಾಯಾಲಯದ ಸಾಮೂಹಿಕ ಆತ್ಮಸಾಕ್ಷಿಯನ್ನು ಕಲಕುವ ಪ್ರಕರಣಗಳಲ್ಲಿ ಮರಣದಂಡನೆ ವಿಧಿಸಲಾಗಿದೆ. ಮರಣದಂಡನೆ ವಿಧಿಸಲ್ಪಟ್ಟ ಅಪರಾಧಿಗೆ ಇರುವ ಕಾನೂನು ಮತ್ತು ಸಾಂವಿಧಾನಿಕ ಅವಕಾಶಗಳನ್ನು ಬಳಸಿಕೊಳ್ಳಲು ಯಾವುದೇ ಸಮಯದ ಮಿತಿ ಇಲ್ಲ. ಘೋರ ಅಪರಾಧಗಳಲ್ಲಿ ಅಪರಾಧಿಗಳು ನ್ಯಾಯದಾನ ಪ್ರಕ್ರಿಯೆಯ ಮೇಲೆಯೇ ಸವಾರಿ ಮಾಡುತ್ತಾರೆ. ನ್ಯಾಯಾಲಯವು ಬಾಧಿತರು ಮತ್ತು ಸಮಾಜದ ಹಿತವನ್ನು ಗಣನೆಗೆ ತಗೆದುಕೊಳ್ಳಬೇಕು. ಈಗಾಗಲೇ ರೂಪಿಸಿರುವ ಮಾರ್ಗಸೂಚಿಯ ಮುಂದುವರೆದ ಭಾಗವಾಗಿ ಈ ಅಂಶವನ್ನು ಪರಿಗಣಿಸಬೇಕು’ ಎಂದು ಕೇಂದ್ರವು ವಾದ ಮಂಡಿಸಿತ್ತು.

ಬ್ಲ್ಯಾಕ್‌ ವಾರೆಂಟ್‌ ಹೊರಡಿಸಿದ ನಂತರ ಮರಣದಂಡನೆಗೆ ಗುರಿಯಾದ ಅಪರಾಧಿಯನ್ನು ಗಲ್ಲಿಗೇರಿಸಲು 7 ದಿನಗಳ ಗಡುವು ವಿಧಿಸಬೇಕು ಎಂದು ಕೋರಿದ ಸರ್ಕಾರ, 2012ರ ನಿರ್ಭಯ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವಲ್ಲಿ ಆಗಿದ್ದ ವಿಳಂಬವನ್ನು ಉಲ್ಲೇಖಿಸಿತ್ತು.

ಪುನರ್‌ ಪರಿಶೀಲನಾ ಅರ್ಜಿ, ಪರಿಹಾರ ಅರ್ಜಿ ಮತ್ತು ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದರಿಂದ ಗಲ್ಲಿಗೇರಿಸಲು ಹಲವು ತಿಂಗಳುಗಳೇ ಕಳೆದಿದ್ದವು ಎಂದು ಅರ್ಜಿಯಲ್ಲಿ ಸರ್ಕಾರ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.