ADVERTISEMENT

ಐಐಟಿ ವಿದ್ಯಾರ್ಥಿ ಸಾವು: ತಂದೆಯಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂದೆಗೆ ಪತ್ರ

ಪಿಟಿಐ
Published 30 ಮಾರ್ಚ್ 2023, 11:31 IST
Last Updated 30 ಮಾರ್ಚ್ 2023, 11:31 IST
   

ಮುಂಬೈ: ‘ತಮ್ಮ ಮಗನ ಸಾವಿನ ಕುರಿತು ಎಫ್‌ಐಆರ್‌ ದಾಖಲಿಸುವ ವಿಚಾರದಲ್ಲಿ ತಮ್ಮ ಕುಟುಂಬವು ಪೊಲೀಸರಿಂದ ಕಿರುಕುಳವನ್ನು ಎದುರಿಸುತ್ತಿದೆ ಎಂದು ಮೃತ ಐಐಟಿ ಬಾಂಬೆ ವಿದ್ಯಾರ್ಥಿ ದರ್ಶನ್ ಸೋಲಂಕಿ ಅವರ ತಂದೆ ರಮೇಶ್‌ ಸೋಲಂಕಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರಿಗೆ ಪತ್ರ ಬರೆದಿದ್ದಾರೆ’ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದರು.

‘ರಮೇಶ್‌ ಅವರು ಈ ಪತ್ರವನ್ನು ಬುಧವಾರ ಬರೆದಿದ್ದಾರೆ. ಕಳೆದ ಎರಡು ವಾರಗಳಿಂದ ಎಫ್‌ಐಆರ್‌ ದಾಖಲಿಸಲು ನಿರಾಕರಿಸುತ್ತಿರುವ ವಿಶೇಷ ತನಿಖಾ ದಳದ (ಎಸ್‌ಐಟಿ) ಪೊಲೀಸ್‌ ಸಿಬ್ಬಂದಿಯಿಂದ ನಮ್ಮ ಕುಟುಂಬವು ಆಘಾತ ಹಾಗೂ ಹತಾಶೆಗೊಳಗಾಗಿದೆ ಎಂದೂ ಪತ್ರದಲ್ಲಿ ನಮೂದಿಸಲಾಗಿದೆ’ ಎಂದರು.

‘ಈ ಪತ್ರದ ಪ್ರತಿಗಳನ್ನು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವರೂ ಆಗಿರುವ ದೇವೇಂದ್ರ ಫಡಣವೀಸ್‌ ಹಾಗೂ ಮುಂಬೈ ಪೊಲೀಸ್‌ ಕಮಿಷನರ್‌ ವಿವೇಕ್‌ ಫನ್ಸಾಲ್ಕರ್‌ ಅವರಿಗೆ ದರ್ಶನ್‌ ತಂದೆ ಕಳುಹಿಸಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

ಅಹಮದಾಬಾದ್‌ನ ದರ್ಶನ್ ಬಿ.ಟೆಕ್ (ಕೆಮಿಕಲ್) ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದರು. ಫೆ. 12ರಂದು ಐಐಟಿ ಬಾಂಬೆಯ ಪೊವೈ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ನ 7ನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದರು. ದರ್ಶನ್ ಪರಿಶಿಷ್ಟ ಜಾತಿಗೆ ಸೇರಿದ್ದ ಕಾರಣ ಅವರು ಜಾತಿ ತಾರತಮ್ಯ ಎದುರಿಸುತ್ತಿದ್ದರು ಎಂದು ಆವರ ಕುಟುಂಬದವರು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.