ADVERTISEMENT

ಪೂರ್ವಭಾವಿ ಪರೀಕ್ಷೆ ಬಳಿಕ ತಾತ್ಕಾಲಿಕ ಕೀ–ಉತ್ತರ: ಯುಪಿಎಸ್‌ಸಿ

ಪಿಟಿಐ
Published 4 ಅಕ್ಟೋಬರ್ 2025, 13:26 IST
Last Updated 4 ಅಕ್ಟೋಬರ್ 2025, 13:26 IST
<div class="paragraphs"><p>ಯುಪಿಎಸ್‌ಸಿ</p></div>

ಯುಪಿಎಸ್‌ಸಿ

   

ನವದೆಹಲಿ: ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆ ಬಳಿಕ ತಾತ್ಕಾಲಿಕ ಕೀ–ಉತ್ತರಗಳನ್ನು ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಗಳೂ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸುವ ಯುಪಿಎಸ್‌ಸಿ, ಕಳೆದ ತಿಂಗಳು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಅಂತಿಮ ಫಲಿತಾಂಶದ ಬಳಿಕ ಅಂತಿಮ ಕೀ– ಉತ್ತರಗಳನ್ನು ಪ್ರಕಟಿಸಲಾಗುವುದು ಎಂದು ಅದು ಮಾಹಿತಿ ನೀಡಿದೆ.

ADVERTISEMENT

ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಪಾರದರ್ಶಕತೆ ಹೆಚ್ಚಿಸುವ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಆಯೋಗ ಪ್ರಮಾಣ ಪತ್ರ ಸಲ್ಲಿಸಿದೆ.

ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ನೇಮಿಸಿದ್ದ ಅಮಿಕಸ್‌ ಕ್ಯೂರಿಯ ಸಲಹೆಗಳನ್ನು ಪಡೆದು, ವಿವಿಧ ವಿಷಯಗಳ ಬಗ್ಗೆ ಚರ್ಚಿಸಿ, ಪ್ರಮಾಣ ಪತ್ರ ಸಲ್ಲಿಸಿರುವುದಾಗಿ ಆಯೋಗ ತಿಳಿಸಿದೆ.

‘ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಶೀಲಿಸಲಾಗುವುದು. ಅಭ್ಯರ್ಥಿಗಳು ಕೀ– ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸುವಾಗ, ಪ್ರತಿ ಆಕ್ಷೇಪಣೆಗೆ ಮೂರು ಅಧಿಕೃತ ಮೂಲಗಳ ದಾಖಲೆಗಳನ್ನು ಸಲ್ಲಿಸಬೇಕು. ಆ ದಾಖಲೆಗಳು ಪೂರಕ ಎಂದು ಕಂಡು ಬರದಿದ್ದರೆ ಅವುಗಳನ್ನು ತಿರಸ್ಕರಿಸಲಾಗುವುದು ಎಂದು ಆಯೋಗ ಹೇಳಿದೆ.

‘ಅಭ್ಯರ್ಥಿಗಳು ಸಲ್ಲಿಸಿದ ದಾಖಲೆಗಳು ಅಧಿಕೃತವೋ ಅಥವಾ ಅಲ್ಲವೋ ಎಂಬುದನ್ನು ಆಯೋಗ ನಿರ್ಧರಿಸುತ್ತದೆ’ ಎಂದು ಅದು ಉಲ್ಲೇಖಿಸಿದೆ.

‘ಇದಕ್ಕಾಗಿ ವಿಷಯ ತಜ್ಞರ ತಂಡವನ್ನು ರಚಿಸಲಾಗುತ್ತದೆ. ಅದು ಅಭ್ಯರ್ಥಿಗಳ ಆಕ್ಷೇಪಣೆಗಳು, ಮೂಲ ದಾಖಲೆಗಳನ್ನು ಪರಾಮರ್ಶಿಸಿ ಅಂತಿಮ ಕೀ– ಉತ್ತರಗಳನ್ನು ಸಿದ್ಧಪಡಿಸುತ್ತದೆ. ಅದನ್ನು ಆಧರಿಸಿಯೇ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ವಿಧಾನಗಳನ್ನು ಸಾಧ್ಯವಾದಷ್ಟು ಬೇಗ ಅನುಸರಿಸಲು ಆಯೋಗ ಬಯಸುತ್ತದೆ’ ಎಂದು ವಿವರಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.