ADVERTISEMENT

ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಆರೋಗ್ಯ ಕ್ಷೀಣಿಸಿದೆ: ಸೇನಾ ಆಸ್ಪತ್ರೆ

ಏಜೆನ್ಸೀಸ್
Published 31 ಆಗಸ್ಟ್ 2020, 6:24 IST
Last Updated 31 ಆಗಸ್ಟ್ 2020, 6:24 IST
ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ
ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ   

ನವದೆಹಲಿ: ದೀರ್ಘವಾದ ಕೋಮಾ ಸ್ಥಿತಿಯಲ್ಲಿರುವ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಆರೋಗ್ಯ ಸ್ಥಿತಿಯು ಕ್ಷೀಣಿಸಿದೆ ಎಂದು ಸೇನಾ ಆಸ್ಪತ್ರೆಯು ತಿಳಿಸಿದೆ. 20 ದಿನಗಳ ಹಿಂದೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಸೋಮವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಶ್ವಾಸಕೋಶದ ಸೋಂಕಿನಿಂದಾಗಿ ಪ್ರಣವ್ ಮುಖರ್ಜಿಯವರು ಸೆಪ್ಟಿಕ್ ಆಘಾತದಲ್ಲಿದ್ದಾರೆ (ತೀವ್ರವಾದ ಮತ್ತು ಸಂಭಾವ್ಯ ಮಾರಣಾಂತಿಕ ಸ್ಥಿತಿ) ಎಂದು ತಿಳಿಸಿದೆ.

'ನಿನ್ನೆಯಿಂದಲೂ ಪ್ರಣವ್ ಮುಖರ್ಜಿ ಅವರ ಆರೋಗ್ಯದಲ್ಲಿ ಕುಸಿತ ಕಂಡುಬಂದಿದ್ದು, ಸೆಪ್ಟಿಕ್ ಆಘಾತದಲ್ಲಿದ್ದಾರೆ ಮತ್ತು ತಜ್ಞ ವೈದ್ಯಕೀಯ ತಂಡ ಅವರ ಆರೋಗ್ಯದ ಮೇಲೆ ನಿಗಾವಹಿಸಿದೆ. ಸದ್ಯ ಅವರು ದೀರ್ಘವಾದ ಕೋಮಾ ಸ್ಥಿತಿಯಲ್ಲಿದ್ದು, ವೆಂಟಿಲೇಟರ್ ಸಹಕಾರ ಮುಂದುವರಿಸಲಾಗಿದೆ' ಎಂದು ಆಸ್ಪತ್ರೆಯು ತಿಳಿಸಿದೆ.

ADVERTISEMENT

84 ವರ್ಷದ ಮುಖರ್ಜಿ ಅವರ ಮಿದುಳಿನಲ್ಲಿ ರಕ್ತಹೆಪ್ಪುಗಟ್ಟಿದ್ದ ಕಾರಣದಿಂದಾಗಿ ಅವರನ್ನು ಆಗಸ್ಟ್ 10ರಂದು ದೆಹಲಿಯ ಕಂಟೋನ್‌ಮೆಂಟ್‌ನ ಸೇನೆಯ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ಆಸ್ಪತ್ರೆಯಲ್ಲಿ ಅವರಿಗೆ ತುರ್ತುಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದಾದ ಬಳಿಕವೂ ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಶಸ್ತ್ರಚಿಕಿತ್ಸೆಗೂ ಮುನ್ನವೇ ಅವರಿಗೆ ಕೋವಿಡ್‌–19 ಇರುವುದು ದೃಢಪಟ್ಟಿತ್ತು.

ಪ್ರಣವ್ ಮುಖರ್ಜಿ ಅವರು 2012 ರಿಂದ 2017ರವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.