ADVERTISEMENT

ಮೇಧಾ ಪಾಟ್ಕರ್‌ಗೆ ಒಂದು ವರ್ಷ ‘ಪ್ರೊಬೇಷನ್’

ಪಿಟಿಐ
Published 8 ಏಪ್ರಿಲ್ 2025, 13:01 IST
Last Updated 8 ಏಪ್ರಿಲ್ 2025, 13:01 IST
ಮೇಧಾ ಪಾಟ್ಕರ್
ಮೇಧಾ ಪಾಟ್ಕರ್   

ನವದೆಹಲಿ: ನರ್ಮದಾ ಬಚಾವೋ ಆಂದೋಲನದ ನಾಯಕಿ, ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರಿಗೆ ಕ್ರಿಮಿನಲ್‌ ಮಾನನಷ್ಟ ಪ್ರಕರಣದಲ್ಲಿ ದೆಹಲಿಯ ನ್ಯಾಯಾಲಯವು ಒಂದು ವರ್ಷ ಪ್ರೊಬೇಷನ್ ಅವಧಿ ವಿಧಿಸಿದೆ.

2000ನೇ ಇಸವಿಯಲ್ಲಿ ದಾಖಲಾಗಿದ್ದ ಮಾನಹಾನಿ ಪ್ರಕರಣದಲ್ಲಿ ಮೇಧಾ ಅವರು ಅಪರಾಧಿ ಎಂದು ತೀರ್ಪು ನೀಡಿದ್ದ ನ್ಯಾಯಾಲಯ ಐದು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.

ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ವಿಶಾಲ್‌ ಸಿಂಗ್‌, ಪಾಟ್ಕರ್ ಅವರ ವಯಸ್ಸು, ಅಪರಾಧದ ತೀವ್ರತೆ ಮತ್ತು ಅವರು ಈ ಹಿಂದೆ ಯಾವುದೇ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗದೇ ಇರುವುದನ್ನು ಪರಿಗಣಿಸಿ ಪ್ರೊಬೇಷನ್‌ ಅವಧಿ ವಿಧಿಸಿರುವುದಾಗಿ ತಿಳಿಸಿದರು.

ADVERTISEMENT

ನ್ಯಾಯಾಧೀಶರು 70 ವರ್ಷದ ಪಾಟ್ಕರ್ ಅವರಿಗೆ ವಿಧಿಸಲಾಗಿದ್ದ ದಂಡದ ಮೊತ್ತವನ್ನು ₹10 ಲಕ್ಷದಿಂದ ₹1 ಲಕ್ಷಕ್ಕೆ ಇಳಿಸಿದರು. 

ಪ್ರೊಬೇಷನ್‌ ಅವಧಿಯಲ್ಲಿ ಅಪರಾಧಿಗಳನ್ನು ಜೈಲಿನಲ್ಲಿ ಇರಿಸದೆ, ಅವರ ದೈನಂದಿನ ಚಟುವಟಿಕೆಯ ಮೇಲೆ ನಿಗಾ ಇಡಲಾಗುತ್ತದೆ. ಮೇಧಾ ಅವರು ಒಂದು ವರ್ಷ ನಿಯುಕ್ತ ಅಧಿಕಾರಿಯ ನಿರೀಕ್ಷಣೆಯಲ್ಲಿರುವರು. ಈ ಅವಧಿಯಲ್ಲಿ ಅವರ ನಡವಳಿಕೆ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಕೆಯಾಗುವ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ.

ಪ್ರಕರಣ ಏನು?: ಪಾಟ್ಕರ್ ತಮ್ಮ ವಿರುದ್ಧ ಹೊರಡಿಸಿದ ಪತ್ರಿಕಾ ಹೇಳಿಕೆಯೊಂದು ಮಾನಹಾನಿಕರವಾಗಿದೆ ಎಂದು ದೂರಿ ದೆಹಲಿ ಲೆಫ್ಟಿನೆಂಟ್ ಗವರ್ನರ್‌ ವಿ.ಕೆ.ಸಕ್ಸೇನಾ ಅವರು 2000ನೇ ಇಸವಿಯಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಆಗ ಸಕ್ಸೇನಾ ಅವರು ನ್ಯಾಷನಲ್ ಕೌನ್ಸಿಲ್ ಆಫ್ ಸಿವಿಲ್‌ ಲಿಬರ್ಟೀಸ್‌ನ ಅಧ್ಯಕ್ಷರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.