ADVERTISEMENT

ಮಾನಹಾನಿ ಪ್ರಕರಣ: ದೆಹಲಿ ಸಿಎಂ ಕೇಜ್ರಿವಾಲ್, ಎಎಪಿ ಸಂಸದನಿಗೆ ಸಮನ್ಸ್‌ ಜಾರಿ

ಪಿಟಿಐ
Published 23 ಮೇ 2023, 11:06 IST
Last Updated 23 ಮೇ 2023, 11:06 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌   

ಅಹಮದಾಬಾದ್: ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಎಎಪಿ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ ಅವರಿಗೆ ಸ್ಥಳೀಯ ಕೋರ್ಟ್‌ ಮಂಗಳವಾರ ಸಮನ್ಸ್‌ ಜಾರಿ ಮಾಡಿದೆ.

ಜೂನ್ 7ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದೆ. ಪ್ರಧಾನಿ ಮೋದಿ ಅವರ ಶೈಕ್ಷಣಿಕ ವಿದ್ಯಾರ್ಹತೆ ಕುರಿತು ಇಬ್ಬರ ಹೇಳಿಕೆಗೆ ಸಂಬಂಧಿಸಿ ಗುಜರಾತ್‌ ವಿಶ್ವವಿದ್ಯಾಲಯವು ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿತ್ತು.

ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್‌.ಜೆ.ಪಾಂಚಾಲ್‌ ಅವರು ಸಮನ್ಸ್ ಜಾರಿ ಮಾಡಿದರು. ಈ ಹಿಂದೆ ಮೇ 23ರಂದು ಸಮನ್ಸ್ ನೀಡಿದ್ದರೂ ಕೋರ್ಟ್‌ನ ಎದುರು ಹಾಜರಾಗಿಲ್ಲ ಎಂದೂ ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.

ADVERTISEMENT

ಗುಜರಾತ್‌ನ ಎಎಪಿ ಕಾನೂನು ವಿಭಾಗದ ಮುಖ್ಯಸ್ಥ ಪ್ರಣವ್ ಠಕ್ಕರ್ ಅವರು, ಕೋರ್ಟ್‌ ಜಾರಿಮಾಡಿದ್ದ ಸಮನ್ಸ್‌ ಅನ್ನು ಇಬ್ಬರೂ ಮುಖಂಡರು ಸ್ವೀಕರಿಸಬೇಕಾಗಿದೆ ಎಂದರು. ಗುಜರಾತ್‌ ವಿಶ್ವವಿದ್ಯಾಲಯ ಪ್ರತಿನಿಧಿಸಿದ್ದ ವಕೀಲ ಅಮಿತ್ ನಾಯರ್, ನೂತನ ನ್ಯಾಯಾಧೀಶರಿಗೆ ಪ್ರಕರಣದ ಹಿನ್ನೆಲೆ ಮತ್ತು ಹಿಂದೆ ಸಮನ್ಸ್ ಜಾರಿಯಾಗಿದ್ದನ್ನು ವಿವರಿಸಿದರು.

ಪ್ರಧಾನಿ ಮೋದಿ ಅವರ ಶೈಕ್ಷಣಿಕ ವಿದ್ಯಾರ್ಹತೆಗೆ ಸಂಬಂಧಿಸಿ ವಿಶ್ವವಿದ್ಯಾಲಯದ ವಿರುದ್ಧ ವ್ಯಂಗ್ಯ, ಮಾನಹಾನಿಕರ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ಇಬ್ಬರ ವಿರುದ್ಧವೂ ಕ್ರಿಮಿನಲ್‌ ಮಾನಹಾನಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಧಾನಿಯವರ ನಿಜವಾದ ಪದವಿ ಪ್ರಮಾಣಪತ್ರ ಇದ್ದರೆ ಅವರಿಗೆ ಏಕೆ ಕೊಡಲಾಗುತ್ತಿಲ್ಲ. ಒಂದು ವೇಳೆ ಗುಜರಾತ್‌ ವಿಶ್ವವಿದ್ಯಾಲಯದಲ್ಲಿ ಮೋದಿ ಶಿಕ್ಷಣ ಪಡೆದುದ್ದೇ ಆಗಿದ್ದರೆ ತನ್ನ ವಿದ್ಯಾರ್ಥಿ ಪ್ರಧಾನಿ ಆಗಿದ್ದಾರೆ ಎಂದು ಸಂಭ್ರಮಿಸಬೇಕಿತ್ತು ಎಂದು ಅರವಿಂದ ಕೇಜ್ರಿವಾಲ್‌ ಹೇಳಿದ್ದರು. ‘ಪ್ರಧಾನಿಯವರ ನಕಲಿ ಪದವಿ ಪ್ರಮಾಣಪತ್ರವನ್ನೇ ಅಸಲಿ ಎಂದು ಸಾಬೀತು ಪಡಿಸಲು ಗುಜರಾತ್ ವಿಶ್ವವಿದ್ಯಾಲಯ ಮುಂದಾಗಿದೆ’ ಎಂದು ಸಿಂಗ್ ಹೇಳಿಕೆ ನೀಡಿದ್ದರು.

ಈ ಹೇಳಿಕೆಗಳು ವ್ಯಂಗ್ಯ ಮತ್ತು ಮಾನಹಾನಿಕರವಾಗಿವೆ ಎಂದು ಗುಜರಾತ್ ವಿಶ್ವವಿದ್ಯಾಲಯ ಪ್ರಕರಣ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.