ADVERTISEMENT

ಮಾನನಷ್ಟ ಮೊಕದ್ದಮೆ: ಖುದ್ದು ಹಾಜರಿಯಿಂದ ರಾಹುಲ್‌ಗೆ ವಿನಾಯಿತಿ

ವಿಚಾರಣೆಯನ್ನು ಆ.6ಕ್ಕೆ ಮುಂದೂಡಿದ ಭಿವಂಡಿ ಕೋರ್ಟ್‌

ಪಿಟಿಐ
Published 18 ಜೂನ್ 2022, 10:38 IST
Last Updated 18 ಜೂನ್ 2022, 10:38 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಠಾಣೆ: ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಶನಿವಾರ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಸ್ಥಳೀಯ ಕೋರ್ಟ್‌ ವಿನಾಯಿತಿ ನೀಡಿದೆ.

‘ಅರ್ಜಿ ವಿಚಾರಣೆ ನಡೆಸಿದ ಭಿವಂಡಿ ನ್ಯಾಯಾಲಯದ ಪ್ರಥಮ ದರ್ಜೆ ನ್ಯಾಯಾಧೀಶ ಎಲ್‌.ಸಿ.ವಾಡಿಕರ್‌ ಅವರು, ಖುದ್ದು ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಕೋರಿದ ಮನವಿಯನ್ನು ಪುರಸ್ಕರಿಸಿದರು. ವಿಚಾರಣೆಯನ್ನು ಆಗಸ್ಟ್‌ 6ಕ್ಕೆ ಮುಂದೂಡಿದರು’ ಎಂದು ರಾಹುಲ್‌ ಗಾಂಧಿ ಪರ ವಕೀಲ ನಾರಾಯಣ ಅಯ್ಯರ್ ತಿಳಿಸಿದ್ದಾರೆ.

‘ನನ್ನ ತಾಯಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕಾರಣದಿಂದಾಗಿ ಕೋರ್ಟ್‌ಗೆ ಶನಿವಾರ ಹಾಜರಾಗಲು ಆಗುವುದಿಲ್ಲ. ಹೀಗಾಗಿ ವಿನಾಯಿತಿ ನೀಡಬೇಕು’ ಎಂದು ಅವರು ಅರ್ಜಿ ಸಲ್ಲಿಸಿದ್ದರು.

ADVERTISEMENT

‘ಬಿದ್ದ ಪರಿಣಾಮ ನನ್ನ ಕಾಲು ಮುರಿದಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು’ ಎಂದು ಕೋರಿ, ದೂರುದಾರರಾದ ರಾಜೇಶ್ ಕುಂಟೆ ಅವರೂ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕೋರ್ಟ್‌ ಮಾನ್ಯ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.