
ರಾಜನಾಥ ಸಿಂಗ್
ನವದೆಹಲಿ: '2024-25ರ ಅಂತ್ಯದ ವೇಳೆಗೆ ದೇಶೀಯ ಮೂಲಗಳಿಂದ ₹1.20 ಲಕ್ಷ ಕೋಟಿ ವೆಚ್ಚದ ಸೇನಾ ಹಾರ್ಡ್‌ವೇರ್ ಹಾಗೂ ಶಸ್ತ್ರಾಸ್ತ್ರಗಳನ್ನು ಖರೀದಿಸಲಾಗಿದೆ' ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಇಂದು (ಮಂಗಳವಾರ) ಮಾಹಿತಿ ನೀಡಿದ್ದಾರೆ.
ಭದ್ರತಾ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸುವತ್ತ ಭಾರತ ಗಮನ ಹರಿಸುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಬದಲಾಗುತ್ತಿರುವ ಯುದ್ಧ ತಂತ್ರಗಾರಿಕೆ ವಿಶೇಷವಾಗಿಯೂ ಯುದ್ಧದಲ್ಲಿ ಡ್ರೋನ್‌ಗಳ ಬಳಕೆಯ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಮನವರಿಕೆ ಇದ್ದು, ಅದಕ್ಕೆ ಅನುಗುಣವಾಗಿ ತಯಾರಿ ನಡೆಸಲಾಗುತ್ತಿದೆ' ಎಂದಿದ್ದಾರೆ.
ಭಾರತದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ.
'2021-22ರ ಅವಧಿಯಲ್ಲಿ ದೇಶೀಯ ಮೂಲಗಳಿಂದ ₹74,000 ಕೋಟಿ ವೆಚ್ಚದ ಸೇನಾ ಸಾಮಾಗ್ರಿ ಖರೀದಿಸಲಾಗಿತ್ತು. ಇದು 2024-25ರ ವೇಳೆಗೆ ₹1.20 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ಕೇವಲ ಅಂಕಿಅಂಶ ಮಾತ್ರವಲ್ಲ. ಬದಲಾದ ಮನಸ್ಥಿತಿಯನ್ನು ತೋರಿಸುತ್ತದೆ' ಎಂದು ತಿಳಿಸಿದ್ದಾರೆ.
'ದೇಶೀಯವಾಗಿ ರಕ್ಷಣಾ ಸಾಮಾಗ್ರಿಗಳ ವಿನ್ಯಾಸ, ಅಭಿವೃದ್ಧಿ ಹಾಗೂ ನಿರ್ಮಾಣವನ್ನು ಉತ್ತೇಜಿಸಲು ಕಳೆದ 10 ವರ್ಷಗಳನ್ನು ಪ್ರಧಾನಿ ಮೋದಿ ನೇತೃತ್ವದಲ್ಲಿ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.