ADVERTISEMENT

ರಾಜ್ಯಸಭಾ ಸಂಸದರ ಅಮಾನತು: ಕ್ಷಮೆ ಕೇಳುವುದಿಲ್ಲ ಎಂದ ವಿರೋಧ ಪಕ್ಷಗಳು

ಪಿಟಿಐ
Published 8 ಡಿಸೆಂಬರ್ 2021, 16:27 IST
Last Updated 8 ಡಿಸೆಂಬರ್ 2021, 16:27 IST
ಸಂಸತ್ತಿನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ವಿಪಕ್ಷ ನಾಯಕರ ಪ್ರತಿಭಟನೆ
ಸಂಸತ್ತಿನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ವಿಪಕ್ಷ ನಾಯಕರ ಪ್ರತಿಭಟನೆ   

ನವದೆಹಲಿ: ರಾಜ್ಯಸಭೆಯ 12 ಸಂಸದರ ಅಮಾನತು ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿರೋಧ ಪಕ್ಷಗಳು ಕೇಂದ್ರದ ಈ ನಡೆ 'ಅನಗತ್ಯ ಮತ್ತು ಪ್ರಜಾಪ್ರಭುತ್ವ ವಿರೋಧಿ' ಎಂದು ಬಣ್ಣಿಸಿದ್ದು, ಸದಸ್ಯರು ಯಾವುದೇ ತಪ್ಪು ಮಾಡಿಲ್ಲದಿದ್ದರಿಂದ ಕ್ಷಮೆ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿವೆ.

ಸಂಸತ್ತಿನಲ್ಲಿ ಸಾರ್ವಜನಿಕ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸದಂತೆ ಕೇಂದ್ರವು ತಮ್ಮನ್ನು ನಿಂದಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.

ಅಮಾನತುಗೊಂಡಿರುವ ಸದಸ್ಯರಿಗೆ ಬೆಂಬಲ ಸೂಚಿಸಿ ಹಲವಾರು ಸಂಸದರು ರಾಜ್ಯಸಭೆಯ ಕಲಾಪನ್ನು ಬಹಿಷ್ಕರಿಸಿ ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಲೋಕಸಭೆಯ ಸಂಸದರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ADVERTISEMENT

ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವದ ದಾರಿ ತಪ್ಪಿಸುತ್ತಿದೆ ಮತ್ತು ಉದ್ದೇಶ ಪೂರ್ವಕವಾಗಿ ವಿಪಕ್ಷಗಳ ಧ್ವನಿಯನ್ನು ಅಡಗಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, 'ಸರ್ಕಾರವು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಹಾಗೂ ವಿಪಕ್ಷಗಳಿಗೆ ಉಪದೇಶ ನೀಡುತ್ತಿದೆ' ಎಂದು ದೂರಿದರು.

'ಸಂಸತ್ತಿನ ಕಲಾಪ ಸುಗಮವಾಗಿ ನಡೆಯಬೇಕೆಂದು ನಾವು ಬಯಸುತ್ತೇವೆ. ಆದರೆ ಸರ್ಕಾರ ರಾಜ್ಯಸಭೆಯ 12 ಸದಸ್ಯರನ್ನು ಅಮಾನತು ಮಾಡುವ ಮೂಲಕ ಒತ್ತಾಯಪೂರ್ವಕವಾಗಿ ಅಡಚಣೆ ಉಂಟು ಮಾಡುತ್ತಿದೆ, ಇದು ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿದೆ' ಎಂದು ಹೇಳಿದರು.

ರಾಜ್ಯಸಭೆಯ ಕಾಂಗ್ರೆಸ್ ಉಪ ನಾಯಕ ಆನಂದ್ ಶರ್ಮಾ ಮಾತನಾಡಿ, 'ಈ ಪ್ರಜಾಪ್ರಭುತ್ವದಲ್ಲಿ ಸರ್ಕಾರವು ಉದ್ದೇಶಪೂರ್ವಕವಾಗಿ ವಿಪಕ್ಷಗಳ ಧ್ವನಿಯನ್ನು ಮೊಟಕುಗೊಳಿಸುತ್ತಿದೆ. ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳನ್ನು ಎತ್ತುವ ಮೂಲಕ ಸಂಸತ್ತಿನ ಕಲಾಪ ಸುಗಮವಾಗಿ ನಡೆಯಲು ವಿಪಕ್ಷಗಳು ಬಯಸುತ್ತವೆ. ಆದರೆ ಸರ್ಕಾರದ ಈ ನಡೆಯಿಂದ ಈ ಪರಿಸ್ಥಿತಿ ಎದುರಾಗಿದೆ. ಈ ಚಳಿಗಾಲದ ಅಧಿವೇಶನವನ್ನು ಎಂದಿಗೂ ಮರೆಯುವಂತಿಲ್ಲ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.