ADVERTISEMENT

ಉತ್ತರಾಖಂಡ | ಮಳೆಗೆ ಕುಸಿದ ಡೆಹ್ರಾಡೂನ್ ಡಿಫೆನ್ಸ್ ಕಾಲೇಜ್‌ ಕಟ್ಟಡ

ಪಿಟಿಐ
Published 14 ಆಗಸ್ಟ್ 2023, 6:31 IST
Last Updated 14 ಆಗಸ್ಟ್ 2023, 6:31 IST
ಡೆಹ್ರಾಡೂನ್ ಡಿಫೆನ್ಸ್ ಕಾಲೇಜ್‌ (ಚಿತ್ರ: ಪಿಟಿಐ)
ಡೆಹ್ರಾಡೂನ್ ಡಿಫೆನ್ಸ್ ಕಾಲೇಜ್‌ (ಚಿತ್ರ: ಪಿಟಿಐ)   

ಡೆಹ್ರಾಡೂನ್ : ಉತ್ತರಾಖಂಡದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ನಿರಂತರ ಮಳೆಗೆ ಮಾಲ್‌ದೇವತದಲ್ಲಿರುವ ‘ಡೆಹ್ರಾಡೂನ್ ಡಿಫೆನ್ಸ್ ಕಾಲೇಜ್‌’ನ ಕಟ್ಟಡ ಕುಸಿದಿದೆ. ಕಟ್ಟಡ ಕುಸಿಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದ ಭಾರತೀಯ ಹವಾಮಾನ ಇಲಾಖೆ, ರಾಜ್ಯದಾದ್ಯಂತ ಭಾನುವಾರ ರೆಡ್ ಅಲರ್ಟ್ ಘೋಷಿಸಿತ್ತು. ಮುಂದಿನ 24 ಗಂಟೆಗಳ ಕಾಲ ರಾಜ್ಯದ ಆರು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ತಿಳಿಸಿತ್ತು.

ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದೆ. ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, 1,169 ಮನೆಗಳಿಗೆ ಹಾನಿಯಾಗಿದೆ. ಹಲವು ರಸ್ತೆಗಳು ಜಲವೃತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ.

ADVERTISEMENT

ಇಲ್ಲಿಯವರೆಗೆ ಮಳೆ ಸಂಬಂಧಿತ ಘಟನೆಗಳಿಂದ 52 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರ ಅಧಿವೇಶನಕ್ಕೆ ತಿಳಿಸಿದೆ.

ಘಟನೆ ಕುರಿತು ಇನ್ನಷ್ಟು ಮಾಹಿತಿ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.