
ದೆಹಲಿಯಲ್ಲಿ ವಾಯು ಗುಣಮಟ್ಟ ಕುಸಿದಿದೆ
–ಪಿಟಿಐ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ ಗಣನೀಯವಾಗಿ ಏರಿಕೆಯಾದ ಕಾರಣ, 11ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹೈಬ್ರಿಡ್ ಮಾದರಿಯಲ್ಲಿ ತರಗತಿಗಳನ್ನು ನಡೆಸುವಂತೆ ದೆಹಲಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರವು ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯ (ಜಿಆರ್‌ಎಪಿ) 4ನೇ ಹಂತದ ಅಡಿಯಲ್ಲಿ ಮಾಲಿನ್ಯ ವಿರೋಧಿ ನಿರ್ಬಂಧಗಳನ್ನು ಜಾರಿಗೆ ತಂದ ನಂತರ ಈ ಆದೇಶ ಬಂದಿದೆ.
ಶಿಕ್ಷಣ ನಿರ್ದೇಶನಾಲಯ, ಎನ್‌ಡಿಎಂಸಿ, ಎಂಸಿಡಿ ಮತ್ತು ದೆಹಲಿ ಕಂಟೋನ್ಮೆಂಟ್ ಮಂಡಳಿಯ ಅಡಿಯಲ್ಲಿ ಬರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಮಾನ್ಯತೆ ಪಡೆದ ಖಾಸಗಿ ಶಾಲೆಗಳು ಮುಂದಿನ ಆದೇಶದವರೆಗೆ ಭೌತಿಕವಾಗಿ ಮತ್ತು ಸಾಧ್ಯವಿರುವಲ್ಲಿ ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಸರ್ಕಾರ ಆದೇಶಿಸಿದೆ.
ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಶನಿವಾರ 431ಕ್ಕೆ ಏರಿಕೆಯಾಗಿದೆ. ಇದರ ನಂತರ ಕೇಂದ್ರ ಸರ್ಕಾರ ಜಿಆರ್‌ಎಪಿ 4ನೇ ಹಂತದ ನಿರ್ಬಂಧಗಳನ್ನು ಜಾರಿಗೆ ತರಲು ನಿರ್ಧರಿಸಿದೆ.
ನಗರವು ಸಂಪೂರ್ಣವಾಗಿ ಕಲುಷಿತ ಗಾಳಿಯಿಂದ ಆವೃತವಾಗಿದ್ದು, ಗೋಚರತೆಯ ಪ್ರಮಾಣವು ತೀವ್ರವಾಗಿ ಕುಸಿದಿದೆ. ಎಕ್ಯುಐ (ವಾಯು ಗುಣಮಟ್ಟ ಸೂಚ್ಯಂಕ) ಇಂದು (ಭಾನುವಾರ) ಬೆಳಿಗ್ಗೆ 491ರಷ್ಟು (400ರಿಂದ 500 ತೀವ್ರ ಕಳಪೆ) ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.