ಚುನಾವಣೆ
(ಸಾಂದರ್ಭಿಕ ಚಿತ್ರ)
ನವದೆಹಲಿ: ದೆಹಲಿ ಚುನಾವಣಾ ಅಖಾಡದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ‘ಮೃದು ಹಿಂದುತ್ವ’ ಹಾಗೂ ಬಿಜೆಪಿಯ ‘ಉಗ್ರ ಹಿಂದುತ್ವ’ದ ಹಣಾಹಣಿ ಏರ್ಪಟ್ಟಿದೆ. ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ಕಿತ್ತಾಟದಿಂದ ತನಗೆ ಲಾಭವಾಗಲಿದೆ ಎಂಬ ನಿರೀಕ್ಷೆಯಲ್ಲಿ ಕಮಲ ಪಾಳಯ ಇದೆ.
ದಶಕದ ಹಿಂದೆ ರಾಜಕಾರಣದಲ್ಲಿ ಹೊಸ ಗಾಳಿ ಹಾಗೂ ನವ ಬೆಳಕಿನ ಅನುಭವ ನೀಡಿದ್ದ ಆಮ್ ಆದ್ಮಿ ಪಕ್ಷವು (ಎಎಪಿ) ಹೊಸ ರಾಜಕಾರಣದ ಪರಿಭಾಷೆಯಿಂದ ದೂರ ಸರಿದು ವರ್ಷಗಳೇ ಕಳೆದಿವೆ. ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲೇ ಪ್ರವರ್ಧಮಾನಕ್ಕೆ ಬಂದ ಪಕ್ಷಕ್ಕೆ ಅಬಕಾರಿ ನೀತಿ ಹಗರಣದ ಕಳಂಕವು ಅಂಟಿಕೊಂಡಿದೆ. ‘ಮದ್ಯದ ನಶೆ’ಯಿಂದಾಗಿ ಕೇಜ್ರಿವಾಲ್, ಮನೀಷ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತಿತರ ನಾಯಕರು ಜೈಲುವಾಸ ಅನುಭವಿಸಿ ಬಂದಿದ್ದಾರೆ. ದೆಹಲಿಯನ್ನು ಒಂದು ದಶಕ ಆಳಿದ್ದ ಕೇಜ್ರಿವಾಲ್ ಪಕ್ಷಕ್ಕೆ ಆಡಳಿತ ವಿರೋಧಿ ಅಲೆಯ ಬಿಸಿಯೂ ಬಲವಾಗಿ ತಟ್ಟಿದೆ. ಇದಕ್ಕಾಗಿ ಮೃದು ಹಿಂದುತ್ವವಾದಕ್ಕೆ ಪಕ್ಷ ಮೊರೆ ಹೋಗಿದೆ.
ದೆಹಲಿಯಲ್ಲಿ ಎಎಪಿಯ ಯಶಸ್ಸಿನ ಭಾರಿ ಅಲೆಗೆ ಬಡವರು, ಹಿಂದುಳಿದವರು ಹಾಗೂ ಮುಸ್ಲಿಮರ ಮತಗಳೇ ಪ್ರಮುಖ ಕಾರಣ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪ್ರಬಲ ನೆಲೆ ಇಲ್ಲ. ಹೀಗಾಗಿ, ವಿಧಾನಸಭಾ ಚುನಾವಣೆಯಲ್ಲಿ ಅನಿವಾರ್ಯವಾಗಿ ಮುಸ್ಲಿಮರು ಎಎಪಿಗೆ ಮತ ಚಲಾಯಿಸುತ್ತಾರೆ ಎಂಬುದನ್ನು ಅಂಕಿ ಅಂಶಗಳು ಬೊಟ್ಟು ಮಾಡುತ್ತವೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ಅವರ ಒಲವು ‘ಕೈ’ ಕಡೆಗೆ. ಇದರಿಂದಾಗಿ, ಕಾಂಗ್ರೆಸ್ ಮತ ಪ‍್ರಮಾಣ ಒಂದಂಕಿಯಿಂದ ಶೇ 20ರ ಆಸುಪಾಸಿಗೆ ಜಿಗಿಯುತ್ತದೆ. ಈ ಚುನಾವಣೆಯಲ್ಲೂ ಮುಸ್ಲಿಂ ಮತಗಳು ಖಚಿತ ಎಂಬ ವಿಶ್ವಾಸ ಇಟ್ಟುಕೊಂಡಿರುವ ಕೇಜ್ರಿವಾಲ್ ಪಕ್ಷವು ಹಿಂದೂ ಮತ ಬ್ಯಾಂಕ್ ಅನ್ನು ಭದ್ರಗೊಳಿಸಲು ಹಲವು ಬಗೆಯ ಕಸರತ್ತು ನಡೆಸಿದೆ.
ಎಎಪಿಯು ಮೆದು ಹಿಂದುತ್ವದ ಹಾದಿ ತುಳಿದು ಹಲವು ಸಮಯ ಆಗಿದೆ. ಈ ಪಕ್ಷವನ್ನು ಬಿಜೆಪಿಯ ‘ಬಿ–ಟೀಮ್’ ಎಂದು ಕಾಂಗ್ರೆಸ್ ಮತ್ತಿತರ ಪಕ್ಷಗಳು ಟೀಕಿಸುವುದುಂಟು. ಅಭಿವೃದ್ಧಿ ಚಟುವಟಿಕೆಗೆ ಅನಾದರ, ಮಾಲಿನ್ಯ ನಿಯಂತ್ರಣದಲ್ಲಿ ವಿಫಲ ಮತ್ತಿತರ ಆರೋಪಗಳನ್ನು ಬೆನ್ನಿಗಂಟಿಸಿಕೊಂಡಿರುವ ಎಎಪಿಗೆ ಈಗ ಕೇಜ್ರಿವಾಲ್ ಪ್ರಭಾವಳಿಯೇ ಆಸರೆ. ಕಲ್ಯಾಣ ಕಾರ್ಯಗಳ ‘ಗ್ಯಾರಂಟಿ’ ಮತಗಳಿಂದ ಕಳೆದೆರಡು ಚುನಾವಣೆಗಳಲ್ಲಿ ಸಲೀಸಾಗಿ ಗೆದ್ದಿದ್ದ ಕೇಜ್ರಿವಾಲ್ ತಂಡಕ್ಕೆ ಈ ಸಲ ಗೆಲುವು ಸುಲಭದ ತುತ್ತಲ್ಲ. ಚುನಾವಣಾ ಅಖಾಡದಲ್ಲಿ ಬಿಜೆಪಿಯ ‘ಉಗ್ರ ಹಿಂದುತ್ವ’ದ ಪ್ರಚಾರಕ್ಕೆ ಕೇಜ್ರಿವಾಲ್ ಅವರದ್ದು ಮೃದು ಹಿಂದುತ್ವದ ಅಸ್ತ್ರ. ಅದಕ್ಕೆ ಹೊಚ್ಚ ಹೊಸ ಸೇರ್ಪಡೆ ಯಮುನಾ ನದಿ ಮಾಲಿನ್ಯ ವಿಚಾರ. ಹರಿಯಾಣದ ಬಿಜೆಪಿ ಸರ್ಕಾರವು ಯಮುನಾ ನದಿಗೆ ವಿಷ ಬೆರೆಸುತ್ತಿದೆ ಎಂಬುದು ಅವರ ಗಂಭೀರ ಆರೋಪ.
ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯ ಬಿಸಿ ಏರುತ್ತಿದ್ದ ಸಮಯವದು. ವಕ್ಫ್ ಮಂಡಳಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಇಮಾಮರು ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ನಿವಾಸದ ಬಳಿ ಪ್ರತಿಭಟನೆ ನಡೆಸಿದರು. ಆ ಹೊತ್ತಿನಲ್ಲೇ, ದೇವಸ್ಥಾನದ ಅರ್ಚಕರಿಗೆ ಹಾಗೂ ಗುರುದ್ವಾರದ ಗ್ರಂಥಿಗಳಿಗೆ ತಿಂಗಳಿಗೆ ₹18 ಸಾವಿರ ನೀಡುವುದಾಗಿ ಕೇಜ್ರಿವಾಲ್ ಘೋಷಿಸಿದರು. ಇದರಿಂದ ಕುಪಿತಗೊಂಡ ಕೆಲವು ಇಮಾಮರು, ‘ಎಎಪಿ ನಾಯಕರು ನಮಗೆ ಚಿಕ್ಕಾಸಿನ ಸಹಾಯ ಮಾಡಲಿಲ್ಲ. ನೆರವು ಕೇಳದೇ ಇದ್ದವರಿಗೆ ಭರಪೂರ ಅನುದಾನ ಪ್ರಕಟಿಸಿದರು. ಚುನಾವಣಾ ಲಾಭಕ್ಕಾಗಿ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ನಾವಿರುವುದು ಕೆಲವೇ ಮಂದಿ. ನಮಗೆ ಕೊಡಲು ಸಣ್ಣ ಮೊತ್ತ ಸಾಕಿತ್ತು. ಅಷ್ಟೊಂದು ಔದಾರ್ಯ ತೋರಲಿಲ್ಲ’ ಎಂದೂ ಅಸಮಾಧಾನ ಸೂಚಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ರೋಹಿಂಗ್ಯಾ ಸಮುದಾಯದ ನಿರಾಶ್ರಿತರನ್ನು ಗಡಿಪಾರು ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಚುನಾವಣಾ ಪ್ರಚಾರ ರ‍್ಯಾಲಿಗಳಲ್ಲಿ ಅಬ್ಬರಿಸಿದ್ದಾರೆ. ಇದಕ್ಕೆ ಕೇಜ್ರಿವಾಲ್ ಅವರದ್ದು ತಣ್ಣನೆಯ ಪ್ರತಿಕ್ರಿಯೆ. ‘ದೆಹಲಿಯಲ್ಲಿ ರೋಹಿಂಗ್ಯಾ ನಿರಾಶ್ರಿತರು ನೆಲಸಲು ಬಿಜೆಪಿಯೇ ಕಾರಣ. ಚುನಾವಣಾ ಲಾಭಕ್ಕಾಗಿ ಗಡಿಪಾರು ಮಾಡುವ ನಾಟಕ ಆಡುತ್ತಿದೆ’ ಎಂಬುದು ಅವರ ದೂರು. ದೆಹಲಿ ಮುಖ್ಯಮಂತ್ರಿ ಆತಿಶಿ ಅವರು ತಮ್ಮ ನಾಯಕನಿಗಿಂತ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ‘ದೆಹಲಿ ಶಾಲೆಗಳಲ್ಲಿ ಅಕ್ರಮ ವಲಸಿಗರ ಮಕ್ಕಳಿಗೆ ಪ್ರವೇಶ ನೀಡಬಾರದು. ಇದರಿಂದ ದೆಹಲಿ ನಾಗರಿಕರ ಮಕ್ಕಳಿಗೆ ಅನ್ಯಾಯವಾಗಲಿದೆ’ ಎಂಬುದು ಅವರ ವಾದ.
ಬದಲಾದೀತೇ ‘ದೇಶಕ್ಕೆ ಮೋದಿ, ದೆಹಲಿಗೆ ಕೇಜ್ರಿವಾಲ್’ ಸೂತ್ರ:
2014 ಹಾಗೂ 2019ರ ಲೋಕಸಭಾ ಚುನಾವಣೆಗಳಲ್ಲಿ ದೆಹಲಿಯ ಎಲ್ಲ ಏಳು ಲೋಕಸಭಾ ಚುನಾವಣೆಗಳನ್ನು ಬಾಚಿಕೊಂಡಿದ್ದ ಬಿಜೆಪಿಗೆ ವಿಧಾನಸಭಾ ಚುನಾವಣೆಗಳಲ್ಲಿ ಚಮತ್ಕಾರ ಮಾಡಲು ಸಾಧ್ಯವಾಗಿಲ್ಲ. 2015ರಲ್ಲಿ ಮೂರು ಹಾಗೂ 2020ರಲ್ಲಿ ಎಂಟು ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಂಡಿತ್ತು. ಕಳೆದೊಂದು ದಶಕದಲ್ಲಿ ಇಲ್ಲಿನ ಮತದಾರರು ‘ದೇಶಕ್ಕೆ ಮೋದಿ, ದೆಹಲಿಗೆ ಕೇಜ್ರಿವಾಲ್’ ಎಂಬ ಸೂತ್ರ ಪಾಲಿಸಿಕೊಂಡು ಬಂದವರು. ಬಿಜೆಪಿಯ ಕಟ್ಟರ್ ಮತದಾರರು ಕೂಡಾ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ನಿಷ್ಠೆ ಬದಲಿಸುತ್ತಿರುವುದರಿಂದ ಎಎಪಿ ಐತಿಹಾಸಿಕ ವಿಜಯ ಸಾಧಿಸುತ್ತಾ ಬಂದಿದೆ. ಎಎಪಿ ಸರ್ಕಾರದ ‘ಉಚಿತ ಯೋಜನೆ’ಗಳ ಆಕರ್ಷಣೆಯೇ ಅವರನ್ನು ಹಿಡಿದಿಟ್ಟುಕೊಂಡಿದೆ. ಆ ಮತ ಬ್ಯಾಂಕ್ ಕೈತಪ್ಪದಂತೆ ನೋಡಿಕೊಳ್ಳಲು ಕೇಜ್ರಿವಾಲ್ ಅವರು ಈ ಸಲ 15 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ.
ಹರಿಯಾಣ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಪ್ರಚಂಡ ವಿಜಯಕ್ಕೆ ‘ಉಗ್ರ ಹಿಂದುತ್ವ’ದ ಪ್ರಚಾರವೂ ಪ್ರಮುಖ ಕಾರಣ. ಅದೇ ಅಲೆಯನ್ನು ದೆಹಲಿಯಲ್ಲೂ ಮುಂದುವರಿಸುವ ಉಮೇದಿನಲ್ಲಿ ಕಮಲ ಪಾಳಯ ಇದೆ. ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರಖ್ಯಾತರಾಗಿರುವ ಪರ್ವೇಜ್ ವರ್ಮಾ, ರಮೇಶ್ ಬಿಧೂಡಿ ಮತ್ತಿತರ ನಾಯಕರಿಗೆ ಟಿಕೆಟ್ ನೀಡಿ ತನ್ನ ನಿಲುವನ್ನು ಸ್ಪಷ್ಟಗೊಳಿಸಿದೆ. ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಬಿಜೆಪಿ ಗೆಲುವಿನಲ್ಲಿ ಮಹತ್ವದ ಭೂಮಿಕೆ ನಿಭಾಯಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ದೆಹಲಿಯ ಮನೆ ಮನೆಗಳನ್ನು ತಲುಪುವ ಕೆಲಸ ಆರಂಭಿಸಿ ತಿಂಗಳುಗಳು ಕಳೆದಿವೆ. ಕೊಳೆಗೇರಿಗಳತ್ತ ಆರ್‌ಎಸ್‌ಎಸ್ ಹಾಗೂ ಭಜರಂಗದಳದ ಕಾರ್ಯಕರ್ತರ ಚಿತ್ತ ಹರಿದಿದೆ. ಉತ್ತರ ಪ್ರದೇಶ ಹಾಗೂ ಬಿಹಾರದಿಂದ ವಲಸೆ ಬಂದಿರುವ ಪೂರ್ವಾಂಚಲಿಗಳ ಮತ ಸೆಳೆಯಲು ಕಮಲ ಪಾಳಯ ಇನ್ನಿಲ್ಲದ ಕಸರತ್ತು ನಡೆಸಿದೆ. ಅವರ ಮತಕ್ಕೆ ಬಿಜೆಪಿಗೆ ಹಿಂದುತ್ವವೇ ಪ್ರಮುಖ ವಿಷಯ. ಇದರಲ್ಲಿ ಎಎಪಿಯೂ ಹಿಂದೆ ಬಿದ್ದಿಲ್ಲ. ಪೂರ್ವಾಂಚಲಿಗಳು ಆಚರಿಸುವ ಛತ್ ಪೂಜೆಗೆ ಎಎಪಿ ಸರ್ಕಾರವು ರಜೆ ಕೊಟ್ಟಿತ್ತು. ಯಮುನಾ ತೀರದಲ್ಲಿ ಪೂಜೆ ನೆರವೇರಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.