ನವದೆಹಲಿ: 2025ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೊಳೆಗೇರಿ ನಿವಾಸಿಗಳ ದುಃಖ–ದುಮ್ಮಾನ ಆಲಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ದೆಹಲಿಯಲ್ಲಿರುವ 1,194 ಕೊಳೆಗೇರಿ ಕ್ಲಸ್ಟರ್‌ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.
ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ನೇತೃತ್ವದಲ್ಲಿ ಕೊಳೆಗೇರಿಗಳಲ್ಲಿ ವಾಸ್ತವ್ಯ ಹೂಡಿದ್ದ ನಾಯಕರು ಅಲ್ಲಿನ ನಿವಾಸಿಗಳ ಜೊತೆ ನೇರ ಸಂವಾದ ನಡೆಸಿ, ಅವರ ಜೀವನದ ಸವಾಲುಗಳ ಬಗ್ಗೆ ಮಾಹಿತಿ ಕಲೆ ಹಾಕಿದರು.
ಕೊಳೆಗೇರಿಗಳಲ್ಲಿ ವಾಸ್ತವ್ಯ ಊಡಿದ್ದ ನಾಯಕರು, ಅವರ ಮನೆಗಳಲ್ಲೇ ರಾತ್ರಿ ಭೋಜನ ಸವಿದಿದ್ದಾರೆ. ಚರ್ಚೆ ಮೂಲಕ ಸಮಸ್ಯೆಗಳ ಪತ್ತೆ ಮತ್ತು ಅವುಗಳಿಗೆ ಪರಿಹಾರ ಹುಡುಕುವ ಯತ್ನ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.
‘ಕೊಳೆಗೇರಿ ನಿವಾಸಿಗಳ ಜೊತೆ ನೇರ ಮಾತುಕತೆ ನಡೆಸಿ ಅವರ ಸವಾಲುಗಳ ಬಗ್ಗೆ ಬಿಜೆಪಿ ನಾಯಕರು ಮಾಹಿತಿ ಕಲೆ ಹಾಕಿದ್ದಾರೆ. ನಾವು ಅವರ ಕಷ್ಟ ಕಾರ್ಪಣ್ಯಗಳನ್ನು ಅರಿತುಕೊಂಡಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿ ಕೊಳಚೆ ನಿರ್ಮೂಲನಾ ಮಂಡಳಿ ಜೊತೆ ಸೇರಿ ಕೊಳೆಗೇರಿ ನಿವಾಸಿಗಳ ಕಲ್ಯಾಣಕ್ಕೆ ಶ್ರಮಿಸುತ್ತೇವೆ’ಎಂದು ಸಚ್‌ದೇವ ತಿಳಿಸಿದ್ದಾರೆ.
ಈ ಕೊಳೆಗೇರಿ ವಾಸ್ತವ್ಯವು ಚುನಾವಣೆ ದೃಷ್ಟಿಯಿಂದ ಮಾತ್ರ ನಡೆಸಿದ್ದಲ್ಲ. ದೆಹಲಿಯ ಕೊಳೆಗೇರಿ ನಿವಾಸಿಗಳ ಸಮಸ್ಯೆಗಳನ್ನು ಅರಿಯಲು ಮಾಡಿದ ಪ್ರಾಮಾಣಿಕ ಪ್ರಯತ್ನವಾಗಿದೆ ಎಂದಿದ್ದಾರೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಗೌತಮ್, ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ ಮತ್ತು ಸಂಸದ ರಾಮವೀರ್ ಸಿಂಗ್ ಬಿಧೂರಿ ಸೇರಿದಂತೆ ಹಿರಿಯ ನಾಯಕರೂ ಕೊಳೆಗೇರಿ ವಾಸ್ತವ್ಯದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.