ADVERTISEMENT

ಮೇಯರ್ ಆಯ್ಕೆ : ದೆಹಲಿ ಎಎಪಿ ಕಚೇರಿ ಮುಂದೆ ಬಿಜೆಪಿ ಪ್ರತಿಭಟನೆ

ಪಿಟಿಐ
Published 7 ಫೆಬ್ರುವರಿ 2023, 9:41 IST
Last Updated 7 ಫೆಬ್ರುವರಿ 2023, 9:41 IST
   

ನವದೆಹಲಿ: ಮಹಾನಗರ ಪಾಲಿಕೆ(ಎಂಸಿಡಿ) ಸಭೆಯಲ್ಲಿ ಮೇಯರ್ ಚುನಾವಣೆಗೆ ಆಮ್‌ ಆದ್ಮಿ ಪಕ್ಷ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಮಂಗಳವಾರ ಪ್ರತಿಭಟನೆ ನಡೆಸಿತು.

ಬಿಜೆಪಿ ಕೌನ್ಸಿಲರ್‌ಗಳು, ಸಂಸದರು ಮತ್ತು ಶಾಸಕರು ಸೇರಿದಂತೆ ದೆಹಲಿ ಮುಖಂಡರು ಎಎಪಿ ಕಛೇರಿ ಬಳಿ ಪ್ರತಿಭಟನೆ ನಡೆಸಿದರು.

ಎಂಸಿಡಿ ಚುನಾವಣೆ ನಡೆದು ತಿಂಗಳು ಕಳೆದರೂ ಮೇಯರ್‌, ಉಪಮೇಯರ್‌ ಆಯ್ಕೆಯಾಗಿಲ್ಲ. ಒಂದೇ ತಿಂಗಳಲ್ಲಿ ಮೂರನೇ ಬಾರಿಗೆ ಮೇಯರ್‌ ಆಯ್ಕೆ ಮುಂದೂಡಿಕೆಯಾಗಿದೆ.

ADVERTISEMENT

ಮೇಯರ್ ಆಯ್ಕೆಗಾಗಿ ನಾಮನಿರ್ದೇಶಿತ ಸದಸ್ಯರ (ಆಲ್ಡರ್‌ಮೆನ್) ಮತದಾನದ ಹಕ್ಕನ್ನು ವಿಸ್ತರಿಸುವ ಅಧ್ಯಕ್ಷರ ನಿರ್ಧಾರ ವಿರೋಧಿಸಿ ಆಮ್‌ ಆದ್ಮಿ ಪಕ್ಷದ ಕೌನ್ಸಿಲರ್‌ಗಳು ಮತ್ತು ಮುಖಂಡರು ಪ್ರತಿಭಟನೆ ನಡೆಸಿದ್ದು, ಪರಿಣಾಮವಾಗಿ ಈ ಹಿಂದಿನ ಎಂಸಿಡಿ ಸಭೆ ಮುಂದೂಡಲಾಗಿತ್ತು.

ಎಎಪಿ ಪ್ರಧಾನ ಕಛೇರಿಯ ಹೊರಗೆ ಪ್ರತಿಭಟನೆ ನಡೆಯಿತು. ಇದರ ನೇತೃತ್ವ ವಹಿಸಿದ್ದ ದೆಹಲಿ ಬಿಜೆಪಿ ಕಾರ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ, ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಮೇಯರ್ ಚುನಾವಣೆಯನ್ನು ವಿಳಂಬಗೊಳಿಸುತ್ತಿದೆ ಎಂದು ಆರೋಪಿಸಿದರು.

ಪಶ್ಚಿಮ ದಿಲ್ಲಿಯ ಸಂಸದ ಪರ್ವೇಶ್ ವರ್ಮಾ, ಆಲ್ಡರ್‌ಮೆನ್‌ಗಳಿಗೆ ನೀಡಲಾದ ಮತದಾನದ ಹಕ್ಕು ಪ್ರಶ್ನಿಸಿರುವ ಎಎಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮೇಯರ್ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸಲು ಸಾಧ್ಯವಿಲ್ಲ ಎಂದು ಎಲ್ಲಿಯೂ ಬರೆದಿಲ್ಲ ಎಂದರು.

ಪ್ರತಿಭಟನೆಯಲ್ಲಿ ದಕ್ಷಿಣ ದೆಹಲಿಯ ಬಿಜೆಪಿ ಸಂಸದ ರಮೇಶ್ ಬಿಧುರಿ, ವಿಧಾನಸಭೆಯ ಪ್ರತಿಪಕ್ಷದ ನಾಯಕ ರಾಮ್‌ವೀರ್ ಸಿಂಗ್ ಬಿಧುರಿ ಮತ್ತು ಶಾಸಕ ವಿಜೇಂದರ್ ಗುಪ್ತಾ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.