ADVERTISEMENT

ದೆಹಲಿ ಸ್ಫೋಟ: ಶೀಘ್ರ ಆರೋಪಿಗಳ ಪತ್ತೆಗೆ ಭದ್ರತಾ ಸಂಸ್ಥೆಗಳಿಗೆ ಅಮಿತ್‌ ಶಾ ಸೂಚನೆ

ಪಿಟಿಐ
Published 11 ನವೆಂಬರ್ 2025, 13:15 IST
Last Updated 11 ನವೆಂಬರ್ 2025, 13:15 IST
   

ನವದೆಹಲಿ: ದೆಹಲಿ ಸ್ಫೋಟದಲ್ಲಿ ಭಾಗಿಯಾದ ಯಾರೊಬ್ಬರನ್ನೂ ಬಿಡುವುದಿಲ್ಲ. ಶೀಘ್ರ ಆರೋಪಿಗಳನ್ನು ಪತ್ತೆಹಚ್ಚಿ, ಬಂಧಿಸುವಂತೆ ಭದ್ರತಾ ಸಂಸ್ಥೆಗಳಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೂಚನೆ ನೀಡಿದ್ದಾರೆ.

ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಮಿತ್‌ ಶಾ, ಭದ್ರತಾ ಸಂಸ್ಥೆಗಳಿಗೆ ಆರೋಪಿಗಳನ್ನು ಪತ್ತೆಹಚ್ಚಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ, ಯಾವುದೇ ಕಾರಣಕ್ಕೂ ಒಬ್ಬ ಅಪರಾಧಿಯೂ ತಪ್ಪಿಸಿಕೊಳ್ಳದಂತೆ ಎಚ್ಚರವಹಿಸಿ ಎಂದು ತಿಳಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅಮಿತ್‌ ಶಾ, ದೆಹಲಿ ಸ್ಫೋಟ ಸಂಬಂಧ ಆರೋಪಿಗಳ ಪತ್ತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಭದ್ರತಾ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಈ ತನಿಖೆಯನ್ನು ಎನ್‌ಐಎಗೆ ವರ್ಗಾಯಿಸಿದ್ದು, ತನಿಖೆಯ ಗಂಭೀರತೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಿಳಿದಿದೆ. ಹೀಗಾಗಿಯೇ ತನಿಖೆಯನ್ನು ಎನ್‌ಐಎ ವಹಿಸಲಾಗಿದೆ. ಏಕೆಂದರೆ ಎನ್‌ಐಎ ಭಯೋತ್ಪಾದಕ ಪ್ರಕರಣಗಳ ಕುರಿತು ತನಿಖೆ ನಡೆಸುತ್ತದೆ. ಈ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಘಗಿದೆ ಎಂದು ಶಾ ಹೇಳಿದ್ದಾರೆ.

ಸ್ಫೋಟದ ಕುರಿತು ಕೂಲಂಕುಶವಾಗಿ ವಿಚಾರಣೆ ನಡೆಸಲು ಎನ್‌ಐಎಗೆ ಸಂಪೂರ್ಣ ಜವಾಬ್ದಾರಿ ವಹಿಸಿಲಾಗಿದೆ. ಭದ್ರತಾ ಸಂಸ್ಥೆಗಳು ಘಟನೆಯ ಬಗ್ಗೆ ಆಳವಾಗಿ ತನಿಖೆ ನಡೆಸಲಿವೆ ಎಂದು ಶಾ ತಿಳಿಸಿದ್ದಾರೆ.

ಸದಾ ಜನದಟ್ಟಣೆಯಿಂದ ಕೂಡಿರುವ ಐತಿಹಾಸಿಕ ಕೆಂಪುಕೋಟೆಯ ಬಳಿ ಸಂಚಾರ ಸಿಗ್ನಲ್‌ನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಸೋಮವಾರ ಸಂಜೆ ಭಾರಿ ಸ್ಫೋಟ ಸಂಭವಿಸಿ 12 ಮಂದಿ ಮೃತಪಟ್ಟಿದ್ದಾರೆ. 24ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ಸೇರಿ ದೇಶದ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.