
ದೆಹಲಿಯ ಕೆಂಪುಕೋಟೆ ಮೆಟ್ರೊ ನಿಲ್ದಾಣದ ಬಳಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಸುಟ್ಟು ನಾಶವಾಗಿರುವ ವಾಹನಗಳನ್ನು ಪೊಲೀಸರು ಪರಿಶೀಲಿಸಿದರು.
– ಪಿಟಿಐ ಚಿತ್ರ
ನವದೆಹಲಿ: ನಿಷೇಧಿತ ಜೈಷ್–ಎ–ಮೊಹಮ್ಮದ್ (ಜೆಇಎಂ) ಮತ್ತು ಅನ್ಸಾರ್ ಗಜ್ವತ್–ಉಲ್–ಹಿಂದ್ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ಡಾ.ಮುಜಮ್ಮಿಲ್ ಗನೈ ಜನವರಿಯಲ್ಲಿ ಹಲವು ಬಾರಿ ಕೆಂಪುಕೋಟೆಗೆ ಭೇಟಿ ನೀಡಿದ್ದ ಸಂಗತಿ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಜನವರಿ 26ರ ಗಣರಾಜ್ಯೋತ್ಸವದಂದು ಐತಿಹಾಸಿಕ ಕೆಂಪುಕೋಟೆಯನ್ನು ಗುರಿಯಾಗಿಸಿ ದಾಳಿ ನಡೆಸುವ ಪಿತೂರಿ ಭಾಗವಾಗಿ ಮಾಹಿತಿಯನ್ನು ಕಲೆಹಾಕುವ ಉದ್ದೇಶದಿಂದ ಮುಜಮ್ಮಿಲ್ ಹಲವು ಬಾರಿ ಕೆಂಪುಕೋಟೆ ಸುತ್ತಮುತ್ತ ಓಡಾಟ ನಡೆಸಿದ್ದ. ಆದರೆ, ಕೆಂಪುಕೋಟೆ ಪ್ರದೇಶದಲ್ಲಿ ಪೊಲೀಸರು, ಭದ್ರತಾಪಡೆಗಳು ಗಸ್ತು ತಿರುಗುತ್ತಿದ್ದ ಕಾರಣ ದಾಳಿ ನಡೆಸುವ ಉಗ್ರರ ಯೋಜನೆ ವಿಫಲವಾಗಿತ್ತು’ ಎಂದು ಹೆಸರೇಳಲು ಬಯಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಕೆಂಪುಕೋಟೆ ಸುತ್ತಮುತ್ತ ಓಡಾಟ ನಡೆಸುತ್ತಿದ್ದ ಮುಜಮ್ಮಿಲ್, ಭದ್ರತಾ ವ್ಯವಸ್ಥೆ ಮತ್ತು ಜನಸಂದಣಿ ಕುರಿತಂತೆ ಹರಿಯಾಣದ ಅಲ್-ಫಲಾಹ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಉಮರ್ ನಬಿಯೊಂದಿಗೆ ಮಾಹಿತಿ ಹಂಚಿಕೊಂಡಿರುವುದು ದೃಢಪಟ್ಟಿದೆ’ ಎಂದೂ ಅವರು ಹೇಳಿದ್ದಾರೆ.
‘ಮುಜಮ್ಮಿಲ್ ಚಲನವಲನಗಳನ್ನು ಟವರ್ ಲೊಕೇಶನ್ ಡೇಟಾ ಮತ್ತು ಹತ್ತಿರದ ಪ್ರದೇಶಗಳಲ್ಲಿ ಸಂಗ್ರಹಿಸಲಾದ ಸಿಸಿಟಿವಿ ದೃಶ್ಯಗಳ ಮೂಲಕ ದೃಢೀಕರಿಸಲಾಗಿದೆ’ ಎಂದೂ ಅವರು ವಿವರಿಸಿದ್ದಾರೆ.
ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಅಂತರ ರಾಜ್ಯ ಮತ್ತು ಅಂತರ ರಾಷ್ಟ್ರೀಯ ಉಗ್ರ ಜಾಲವನ್ನು ಭೇದಿಸಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನ.10ರಂದು (ಸೋಮವಾರ) ಮೂವರು ವೈದ್ಯರು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ದೆಹಲಿಯ ಕೆಂಪುಕೋಟೆ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಭಾರಿ ಸ್ಫೋಟ ಸಂಭವಿಸಿ 12 ಮಂದಿ ಮೃತಪಟ್ಟಿದ್ದರು. 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.