
ಶ್ವಾನದಳದೊಂದಿಗೆ ಭದ್ರತಾ ಸಿಬ್ಬಂದಿ ಶೋಧ
ದೆಹಲಿ: ಬಾಬರಿ ಮಸೀದಿ ಧ್ವಂಸದ ವಾರ್ಷಿಕ ದಿನವಾದ ಡಿಸೆಂಬರ್ 6ರಂದು ಪ್ರಬಲ ಸ್ಫೋಟ ನಡೆಸಲು ಡಾ. ಉಮರ್ ನಬಿ ಯೋಜಿಸಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಬಂಧಿಸಲಾಗಿರುವ ಎಂಟು ಜನರ ತೀವ್ರ ವಿಚಾರಣೆ ಹಾಗೂ ಅವರ ಕುಟುಂಬದವರು, ಸ್ನೇಹಿತರು ಮತ್ತು ನೆರೆಯವರ ವಿಚಾರಣೆಯಿಂದ ಈ ಮಾಹಿತಿ ದೊರೆತಿದೆ ಎಂದು ಅವರು ವಿವರಿಸಿದ್ದಾರೆ.
ಡಾ. ಮುಜಮ್ಮಿಲ್ ಗನಿ ಬಂಧನ ಮತ್ತು ಅಪಾರ ಪ್ರಮಾಣದ ಅಮೋನಿಯಂ ನೈಟ್ರೇಟ್ ಸ್ಫೋಟಕ ಪತ್ತೆಯಾಗಿ ದ್ದರಿಂದ ಉಮರ್ ಭೀತಿಗೆ ಒಳಗಾಗಿದ್ದ ಎಂದು ಹೇಳಿದ್ದಾರೆ.
ಒಂಟಿಯಾಗಿದ್ದ ಉಮರ್ ಉತ್ತಮ ಶೈಕ್ಷಣಿಕ ದಾಖಲೆ ಹೊಂದಿದ್ದ. ಆತನು ಗನಿ ಜತೆಗೂಡಿ 2021ರಲ್ಲಿ ಟರ್ಕಿ ಪ್ರವಾಸ ಕೈಗೊಂಡಿದ್ದ. ಅದು ಆತನ ಜೀವನದಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣವಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಪ್ರವಾಸದ ವೇಳೆ ಇಬ್ಬರೂ, ನಿಷೇಧಿತ ಜೆಇಎಂನ ಭೂಗತ ಕಾರ್ಯಕರ್ತರನ್ನು ಭೇಟಿಯಾಗಿದ್ದರು ಎಂಬುದು ಗೊತ್ತಾಗಿದೆ.
ಟರ್ಕಿ ಪ್ರವಾಸದ ಬಳಿಕ ಉಮರ್, ಗನಿ ಜತೆಗೆ ಅಮೋನಿಯಂ ನೈಟ್ರೇಟ್, ಪೊಟ್ಯಾಷಿಯಂ ನೈಟ್ರೇಟ್, ಸಲ್ಫರ್ ಸೇರಿದಂತೆ ವಿವಿಧ ಸ್ಫೋಟಕಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದ. ಇವುಗಳನ್ನು ಅಲ್–ಫಲಾಹ್ ವಿಶ್ವವಿದ್ಯಾಲಯದ ಕ್ಯಾಂಪಸ್ ಮತ್ತು ಸುತ್ತಮುತ್ತ ಸಂಗ್ರಹಿಸಲು ಮುಂದಾಗಿದ್ದ ಎಂದು ಅವರು ವಿವರಿಸಿದ್ದಾರೆ.
‘ಡಿಸೆಂಬರ್ ಭಯೋತ್ಪಾದನಾ ಯೋಜನೆಯ ಬಗ್ಗೆ ಉಮರ್ ತನ್ನ ಸಹಚರರಿಗೆ ಮಾಹಿತಿ ನೀಡಿದ್ದ. ತಾನು ಖರೀದಿಸಿದ್ದ ಹುಂಡೈ ಐ20 ಕಾರಿನಲ್ಲಿ ಸ್ಫೋಟಕಗಳನ್ನು ಇರಿಸಲು ಸಿದ್ಧತೆ ನಡೆಸಿದ್ದ. ಇದಕ್ಕಾಗಿ ಇಂಟರ್‌ನೆಟ್‌ನಿಂದ ಮಾಹಿತಿ ಸಂಗ್ರಹಿಸಿ, ವಾಹನ ಆಧಾರಿತ ಸ್ಫೋಟಕ ಸಾಧನ (ವಿಬಿಐಇಡಿ) ಅಳವಡಿಸಲು ಯೋಜಿಸಿದ್ದ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಅಕ್ಟೋಬರ್ 26ರಂದು ಆತ ಕಾಶ್ಮೀರಕ್ಕೆ ಹೋಗಿ, ಸ್ನೇಹಿತರು ಮತ್ತು ಸಂಬಂಧಿಕರ ಜತೆ ಕೆಲ ದಿನಗಳು ಕಳೆದಿದ್ದ. ಅಲ್ಲಿಂದ ಫರೀದಾಬಾದ್‌ಗೆ ಹಿಂದಿರುಗುವ ಮುನ್ನ, ತಾನು ಮೂರು ತಿಂಗಳು ಲಭ್ಯವಿರುವುದಿಲ್ಲ ಎಂದು ಸ್ನೇಹಿತರು ಮತ್ತು ಸಂಬಂಧಿಕರಿಗೆ ತಿಳಿಸಿದ್ದನು’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಯೋಜನೆಯ ಪ್ರಕಾರ ಕಾರಿಗೆ ವಿಬಿಐಇಡಿ ಅಳವಡಿಸಿ, ಕೆಲ ಕಾಲ ಕಣ್ಮರೆಯಾಗುವ ಉದ್ದೇಶವನ್ನು ಉಮರ್ ಹೊಂದಿದ್ದ. ಆದರೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಕಾರ್ಯಾಚರಣೆಯಿಂದ ಆತಂಕಗೊಂಡಿದ್ದ ಎಂದು ಅವರು ತಿಳಿಸಿದ್ದಾರೆ.
ಭಯೋತ್ಪಾದಕ ಕೃತ್ಯ: ಸರ್ಕಾರ
ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ನಡೆದ ಕಾರು ಸ್ಫೋಟವನ್ನು ‘ಭಯೋತ್ಪಾದಕ ಕೃತ್ಯ’ ಎಂದು ಕರೆದಿರುವ ಕೇಂದ್ರ ಸರ್ಕಾರ, ಈ ಪ್ರಕರಣವನ್ನು ತನಿಖಾ ಸಂಸ್ಥೆಗಳು ಅತ್ಯಂತ ತ್ವರಿತ ಮತ್ತು ವೃತ್ತಿಪರತೆಯಿಂದ ನಿಭಾಯಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ವಿಳಂಬವಿಲ್ಲದೆ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣು ನೀತಿಗೆ ಭಾರತ ಬದ್ಧವಾಗಿದೆ ಎಂದು ಪುನರುಚ್ಚರಿಸಲಾಯಿತು. ಈ ಘಟನೆಯಲ್ಲಿ ಮೃತಪಟ್ಟವರ ಗೌರವಾರ್ಥ ಎರಡು ನಿಮಿಷ ಮೌನ ಆಚರಿಸಲಾಯಿತು. ಅಲ್ಲದೆ ಜೀವಹಾನಿ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.