
ಎನ್‌ಐಎ
ನವದೆಹಲಿ: ಕೆಂಪುಕೋಟೆ ಬಳಿ ಹುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ 12 ಜೀವಗಳನ್ನು ಬಲಿ ಪಡೆದ ದುರ್ಘಟನೆಯು ‘ಆತ್ಮಹತ್ಯಾ ಬಾಂಬ್ ದಾಳಿ’ ಅಥವಾ ‘ದೊಡ್ಡ ಭಯೋತ್ಪಾದಕ ಸಂಚಿನ ಪ್ರಕರಣವಾಗಿರಬಹುದೇ’ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ ಬಳಿಕ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಹಸ್ತಾಂತರಿಸಲಾಗಿದೆ.
ದುರ್ಘಟನೆ ಸಂಬಂಧ ದೆಹಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಿದ್ದಾರೆ. ಇದು ಭಯೋತ್ಪಾದಕ ಪ್ರಕರಣಗಳಲ್ಲಿ ಅನ್ವಯಿಸುವ ಕಾನೂನು. ಸ್ಫೋಟಕ ವಸ್ತುಗಳ ಕಾಯ್ದೆಯಡಿಯಲ್ಲೂ ಪ್ರಕರಣ ದಾಖಲಿಸಿರುವ ಪೊಲೀಸರು, ರಾಷ್ಟ್ರ ರಾಜಧಾನಿಯ ವಿವಿಧ ಕಡೆಗಳಲ್ಲಿ ಹಾಗೂ ಫರೀದಾಬಾದ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾದ ವೈದ್ಯ ಡಾ. ಉಮರ್ ನಬಿ (34) ಎಂಬಾತ ಕಾರು ಸ್ಫೋಟದ ಪ್ರಮುಖ ಶಂಕಿತ ವ್ಯಕ್ತಿ. ಆತ ಫರೀದಾಬಾದ್‌ನಲ್ಲಿ ಪತ್ತೆಯಾದ ಭಯೋತ್ಪಾದಕರ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಆದರೆ, ಈ ಆರೋಪವನ್ನು ಆತನ ಕುಟುಂಬ ಸದಸ್ಯರು ತಳ್ಳಿ ಹಾಕಿದ್ದಾರೆ.
ಫರೀದಾಬಾದ್‌ನಲ್ಲಿ 360 ಕೆ.ಜಿ ಅಮೋನಿಯಂ ನೈಟ್ರೇಟ್ ಸೇರಿದಂತೆ 2,900 ಕೆ.ಜಿ ಸ್ಫೋಟಕಗಳನ್ನು ಸೋಮವಾರ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣಕ್ಕೂ ಸ್ಫೋಟ ಘಟನೆಗೂ ಸಂಬಂಧವಿರುವುದು ಪ್ರಾಥಮಿಕ ತನಿಖೆಗಳಿಂದ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ದೇಶದಿಂದ ಸಂಗ್ರಹಿಸಲಾದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ವಿಶ್ಲೇಷಿಸಿದ ನಂತರ, ಸ್ಫೋಟಕ್ಕೆ ಬಳಸಲಾದ ಕಾರನ್ನು ಚಾಲನೆ ಮಾಡಿದ ವ್ಯಕ್ತಿ ಪುಲ್ವಾಮಾದ ವೈದ್ಯ ಉಮರ್ ನಬಿ ಎಂದು ತನಿಖಾಧಿಕಾರಿಗಳು ಗುರುತಿಸಿದ್ದಾರೆ. ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಮತ್ತು ಡಿಟೋನೇಟರ್‌ಗಳನ್ನು ಬಳಸಿರಬಹುದು ಎಂದು ಪ್ರಾಥಮಿಕ ತನಿಖೆಗಳಿಂದ ಗೊತ್ತಾಗಿದೆ.
ಮುಖವಾಡ ಧರಿಸಿದ ವ್ಯಕ್ತಿ ಕಾರನ್ನು ಚಲಾಯಿಸುತ್ತಿರುವುದು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಈ ಕಾರು ಸ್ಫೋಟಗೊಂಡಿದೆ. ಕಾರಿನಲ್ಲಿ ದೇಹದ ಭಾಗಗಳು ಕಂಡುಬಂದಿವೆ. ಆದರೂ, ಫರೀದಾಬಾದ್‌ನ ಅಲ್-ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದ ಉಮರ್ ನಬಿಯೇ ಕಾರು ಸ್ಫೋಟಿಸಿದ ವ್ಯಕ್ತಿ ಎಂಬುದನ್ನು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆ ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪುಲ್ವಾಮಾದಲ್ಲಿರುವ ಡಾ. ನಬಿ ಅವರ ತಾಯಿಯಿಂದ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿದರು.
ಉಮರ್ ನಬಿ ಫರೀದಾಬಾದ್ ಭಯೋತ್ಪಾದನಾ ಜಾಲದ ಭಾಗವಾಗಿದ್ದಾನೆಂದು ಶಂಕಿಸಲಾಗಿದೆ. ಆತನಿಗೆ ಜೈಶ್-ಎ-ಮೊಹಮ್ಮದ್ ಜೊತೆ ನಂಟು ಇದೆ ಎಂದು ತನಿಖಾಧಿಕಾರಿಗಳು ಹೇಳಿಕೊಂಡಿದ್ದಾರೆ.
ಉಮರ್ ಜತೆಗೆ ಸಂಬಂಧ ಹೊಂದಿದ್ದ ಇನ್ನಿಬ್ಬರು ವೈದ್ಯರಾದ ಅದೀಲ್ ಅಹ್ಮದ್ ರಾಥೆರ್ ಮತ್ತು ಮುಜಮ್ಮಿಲ್ ಶಕೀಲ್ ಅವರನ್ನು ಕ್ರಮವಾಗಿ ಉತ್ತರ ಪ್ರದೇಶದ ಸಹರಾನ್‌ಪುರ ಮತ್ತು ಹರಿಯಾಣದ ಫರೀದಾಬಾದ್‌ನಲ್ಲಿ ಬಂಧಿಸಲಾಗಿತ್ತು. ಉನ್ನತ ಶಿಕ್ಷಣ ಪಡೆದು ಉತ್ತಮ ಹುದ್ದೆಯಲ್ಲಿರುವವರು ನಡೆಸುವ ಇಂತಹ ದುಷ್ಕೃತ್ಯಗಳನ್ನು ‘ವೈಟ್ ಕಾಲರ್ ಭಯೋತ್ಪಾದನೆ ಮಾದರಿ‘ ಎಂದು ತನಿಖಾಧಿಕಾರಿಗಳು ವರ್ಗೀಕರಿಸಿದ್ದಾರೆ.
ಘಟನೆ ಸಂಬಂಧ ತಾರೀಕ್ ಎಂಬಾತನನ್ನು ಸೋಮವಾರ ತಡರಾತ್ರಿಯೇ ಬಂಧಿಸಲಾಗಿತ್ತು. ಉಮ್ಮರ್ ಮೊಹಮ್ಮದ್‌ಗೆ ತಾರೀಕ್ ಕಾರನ್ನು ನೀಡಿದ್ದ. ಭಯೋತ್ಪಾದನಾ ಚಟುವಟಿಕೆಯ ಸಂಚಿನ ಭಾಗವಾಗಿದ್ದ ಸಹ ವೈದ್ಯರನ್ನು ಬಂಧಿಸಿದ ನಂತರ ಉಮ್ಮರ್ ಆತಂಕ ಹಾಗೂ ಭಯದಿಂದ ಈ ದುಷ್ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಉಮರ್ ನಬಿ ಬದರ್‌ಪುರ ಮೂಲಕ ರಾಜಧಾನಿಯನ್ನು ಪ್ರವೇಶಿಸಿ, ಮಧ್ಯಾಹ್ನ 3.20ರ ಸುಮಾರಿಗೆ ಕೆಂಪು ಕೋಟೆ ಬಳಿಯ ವಾಹನ ನಿಲುಗಡೆ ಸ್ಥಳ ತಲುಪಿದ್ದ. ಆತ ಸಂಜೆ 6.30ರವರೆಗೆ ಕಾರಿನೊಳಗೆ ಇದ್ದ ಎಂದು ಮೂಲಗಳು ತಿಳಿಸಿವೆ. ಸೋಮವಾರ ಸಂಜೆ 6.52ಕ್ಕೆ ನಿಧಾನವಾಗಿ ಚಲಿಸಿದ ವಾಹನದಲ್ಲಿ ಸ್ಫೋಟ ಸಂಭವಿಸಿದೆ ಎಂದು ದೆಹಲಿ ಪೊಲೀಸ್ ಕಮಿಷನರ್ ಸತೀಶ್ ಗೋಲ್ಚಾ ಹೇಳಿದ್ದಾರೆ.
ಹೆಚ್ಚಿನ ವಿವರಗಳನ್ನು ಪಡೆಯಲು ಸ್ಫೋಟ ನಡೆದ ಪ್ರದೇಶ ಮತ್ತು ಪಕ್ಕದ ಮಾರ್ಗಗಳ ಖಾಸಗಿ ಮತ್ತು ವಾಣಿಜ್ಯ ಕಟ್ಟಡಗಳಿಂದ ಸಂಗ್ರಹಿಸಲಾದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಹಲವಾರು ತಂಡಗಳು ಪರಿಶೀಲಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ಮೂರು ಗಂಟೆ ಕಾರು ಪಾರ್ಕಿಂಗ್ ಸ್ಥಳದಲ್ಲಿ ನಿಂತಿತ್ತು ಎಂಬ ಮಾಹಿತಿಯನ್ನು ತನಿಖಾಧಿಕಾರಿಗಳು ಸಂಗ್ರಹಿಸಿದ್ದಾರೆ.
ಬಾಂಬ್ ಸ್ಫೋಟ: ಎಫ್‌ಐಆರ್‌ನಲ್ಲಿ ಉಲ್ಲೇಖ
ಯುಎಪಿಎ ಸೆಕ್ಷನ್ 16 (ಭಯೋತ್ಪಾದಕ ಕೃತ್ಯಗಳು), ಸೆಕ್ಷನ್ 18 (ಪಿತೂರಿ) ಸೇರಿದಂತೆ ಇತರ ಪ್ರಕರಣಗಳನ್ನು ದಾಖಲಿಸಲಾಗಿದೆ
ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸ ಲಾಗಿದೆ– ಜೀವಕ್ಕೆ ಅಪಾಯವನ್ನುಂಟುಮಾಡುವ ಸ್ಫೋಟ ಕಾರಣವಾದುದಕ್ಕೆ ಸೆಕ್ಷನ್ 3; ಸ್ಫೋಟಕ್ಕೆ ಕಾರಣವಾದ ಪ್ರಯತ್ನಕ್ಕೆ ಸೆಕ್ಷನ್ 4ರ ಅಡಿಯಲ್ಲಿ ಪ್ರಕರಣ ದಾಖಲು
ಬಿಎನ್‌ಎಸ್ ಸೆಕ್ಷನ್‌ಗಳು: 103(1) ಕೊಲೆಗೆ, 109(1) ಕೊಲೆಗೆ ಯತ್ನಕ್ಕೆ, 161(2) ಉನ್ನತ ಅಧಿಕಾರಿಯ ಮೇಲೆ ಹಲ್ಲೆಗೆ ಪ್ರಚೋದನೆಗೆ. ಇದು ಬಾಂಬ್ ಸ್ಫೋಟ ಎಂದು ಎಫ್‌ಐಆರ್‌ನಲ್ಲಿದೆ.
ಜೋರಾದ ಸ್ಫೋಟ ಸಂಭವಿಸಿತು. ಸ್ಫೋಟದ ಪರಿಣಾಮವಾಗಿ ಪೊಲೀಸ್ ಠಾಣೆಯ ಗೋಡೆ ಕುಸಿಯಿತು. ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರುಗಳು ಉರಿಯುತ್ತಿರುವುದನ್ನು ಮತ್ತು ಗಾಯಾಳುಗಳು ರಸ್ತೆಯಲ್ಲಿ ಹೊರಳಾಡುತ್ತಿರುವುದನ್ನು ನೋಡಿದರು. ಎಲ್ಲ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ದೂರುದಾರರಾದ ಕೆಂಪು ಕೋಟೆ ಪೊಲೀಸ್ ಪೋಸ್ಟ್‌ನ ಉಸ್ತುವಾರಿ ವಿನೋದ್ ನೈನ್ ಹೇಳುತ್ತಾರೆ.
ಮನೆ ಮಾಲೀಕ ಪೊಲೀಸ್ ವಶಕ್ಕೆ
ಗುರುಗ್ರಾಮ: ದೆಹಲಿ ಕೆಂಪುಕೋಟೆ ಬಳಿ ಸ್ಫೋಟಗೊಂಡ ಕಾರಿನ ಮೊದಲ ಮಾಲೀಕರಿಗೆ ಬಾಡಿಗೆ ಮನೆ ನೀಡಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಹರಿಯಾಣದಲ್ಲಿ ನೋಂದಣಿಯಾಗಿರುವ ಕಾರಿನ ಮೊದಲ ಮಾಲೀಕ ಮೊಹಮ್ಮದ್ ಸಲ್ಮಾನ್ ಅವರು 2016ರಿಂದ 2020ರವರೆಗೆ ಗುರುಗ್ರಾಮದ ಬಾಡಿಗೆ ಮನೆಯೊಂದರಲ್ಲಿದ್ದರು. ಆ ಮನೆಯ ಮಾಲೀಕ ದಿನೇಶ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ.
‘ನಮ್ಮ ಶಾಂತಿನಗರದ ಮನೆಯಲ್ಲಿ ಸಲ್ಮಾನ್, ಅವರ ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ನಾಲ್ಕು ವರ್ಷ ವಾಸಿಸಿದ್ದರು. ಬಳಿಕ
ಗುರುಗ್ರಾಮದಲ್ಲಿನ ತಮ್ಮ ಸ್ವಂತ ಫ್ಲ್ಯಾಟ್‌ಗೆ ಸ್ಥಳಾಂತರ ಗೊಂಡಿದ್ದರು’ ಎಂದು ದಿನೇಶ್ ಕುಟುಂಬಸ್ಥರು ತಿಳಿಸಿದ್ದಾರೆ.
ಸಲ್ಮಾನ್ ಅವರು ತಮ್ಮ ಕಾರನ್ನು ದೆಹಲಿಯ ಓಕ್ಲಾ ನಿವಾಸಿ ದೇವೇಂದ್ರ ಅವರಿಗೆ ಮಾರಾಟ ಮಾಡಿದ್ದರು. ದೇವೇಂದ್ರ ಅವರಿಂದ ಅದೇ ಕಾರನ್ನು ಖರೀದಿಸಿದ್ದ ಅಂಬಾಲದ ನಿವಾಸಿಯೊಬ್ಬರು ಪುಲ್ವಾಮದ ತಾರೀಕ್ ಎಂಬವರಿಗೆ ಮಾರಾಟ ಮಾಡಿದ್ದರು.
ಕಾರು ಸ್ಫೋಟದ ಹಿಂದಿನ ಸಂಚುಕೋರರನ್ನು ಸುಮ್ಮನೆ ಬಿಡುವುದಿಲ್ಲ. ಕೃತ್ಯಕ್ಕೆ ಕಾರಣರಾದ ಪ್ರತಿಯೊಬ್ಬರನ್ನೂ ನಮ್ಮ ತನಿಖಾ ಸಂಸ್ಥೆಗಳು ಕಾನೂನಿನ ಎದುರು ತಂದು ನಿಲ್ಲಿಸಲಿವೆ.– ನರೇಂದ್ರ ಮೋದಿ, ಪ್ರಧಾನಿ
ದಿನದ ಬೆಳವಣಿಗೆ
ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳ ವಿಶ್ಲೇಷಣೆ
ದೆಹಲಿ ಪೊಲೀಸರಿಂದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು
ಬೆಳಿಗ್ಗೆ ಹಾಗೂ ಮಧ್ಯಾಹ್ನ ಉನ್ನತ ಮಟ್ಟದ ಸಭೆ ನಡೆಸಿದ ಗೃಹ ಸಚಿವ ಅಮಿತ್ ಶಾ
ರಾಷ್ಟ್ರ ರಾಜಧಾನಿ ಹಾಗೂ ಫರೀದಾಬಾದ್‌ನ ವಿವಿಧ ಕಡೆಗಳಲ್ಲಿ ಪೊಲೀಸರಿಂದ ಶೋಧ ಕಾರ್ಯಾಚರಣೆ
ವೈದ್ಯ ಉಮರ್ ನಬಿ ತಾಯಿಯ ಡಿಎನ್‌ಎ ಪರೀಕ್ಷೆ
ರಾಜಧಾನಿಯಲ್ಲಿ ಕಣ್ಗಾವಲು ಮತ್ತಷ್ಟು ಹೆಚ್ಚಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.