@narendramodi
ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟದಲ್ಲಿ ಬದುಕುಳಿದವರನ್ನು ಲೋಕ ನಾಯಕ್ ಜೈ ಪ್ರಕಾಶ್ ನಾರಾಯಣ್ (ಎಲ್‌ಎನ್‌ಜೆಪಿ) ಆಸ್ಪತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು (ಬುಧವಾರ) ಭೇಟಿ ಮಾಡಿದ್ದಾರೆ.
ಭೂತಾನ್ ಪ್ರವಾಸದಿಂದ ಭಾರತಕ್ಕೆ ವಾಪಸ್ ಆದ ಬಳಿಕ ನೇರವಾಗಿ ಪ್ರಧಾನಿ ಮೋದಿ ಆಸ್ಪತ್ರೆಗೆ ಭೇಟಿ ನೀಡಿ, ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು. ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.
ಈ ವೇಳೆ ಆಸ್ಪತ್ರೆಯ ವೈದ್ಯರು ಹಾಗೂ ಅಧಿಕಾರಿಗಳು ಮೋದಿ ಅವರಿಗೆ ಗಾಯಗಳುಗಳ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದರು.
ಈ ಸ್ಫೋಟಕ್ಕೆ ಕಾರಣರಾದರನ್ನು ಕಾನೂನಿನ ಪ್ರಕಾರ ಕಠಿಣವಾಗಿ ಶಿಕ್ಷಿಸಲಾಗುವುದು ಎಂದು ಸಂತ್ರಸ್ತರ ಭೇಟಿ ಬಳಿಕ ಮೋದಿ ತಿಳಿಸಿದ್ದಾರೆ
ಪ್ರಧಾನಿ ಮೋದಿ ಭೇಟಿ ಹಿನ್ನಲೆ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಮತ್ತು ಸುತ್ತಮುತ್ತ ಭಾರಿ ಭದ್ರತೆಯನ್ನು ನಿಯೋಜಿಸಲಾಗಿತ್ತು.
ಸದಾ ಜನದಟ್ಟಣೆಯಿಂದ ಕೂಡಿರುವ ಐತಿಹಾಸಿಕ ಕೆಂಪುಕೋಟೆಯ ಬಳಿ ಸಂಚಾರ ಸಿಗ್ನಲ್‌ನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಸೋಮವಾರ ಸಂಜೆ ಭಾರಿ ಸ್ಫೋಟ ಸಂಭವಿಸಿ 12 ಮಂದಿ ಮೃತಪಟ್ಟಿದ್ದಾರೆ. 24ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ಸೇರಿ ದೇಶದ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.