ADVERTISEMENT

ದೆಹಲಿ ಸ್ಫೋಟ ಪ್ರಕರಣ: ಜಮ್ಮು–ಕಾಶ್ಮೀರದ ಹಲವೆಡೆ ಎನ್‌ಐಎ ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2025, 4:47 IST
Last Updated 1 ಡಿಸೆಂಬರ್ 2025, 4:47 IST
ಎನ್‌ಐಎ 
ಎನ್‌ಐಎ    

ಶ್ರೀನಗರ: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ್ದ ಕಾರು ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಸೋಮವಾರ ಕಾಶ್ಮೀರ ಕಣಿವೆಯಾದ್ಯಂತ ಹಲವು ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದ್ದಾರೆ ಎಂದು ವರದಿಯಾಗಿದೆ.

ಕಾಶ್ಮೀರದ ಶೋಪಿಯಾನ್, ಪುಲ್ವಾಮಾ, ಕುಲ್ಗಾಮ್ ಜಿಲ್ಲೆಗಳ ಎಂಟು ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ. ಪುಲ್ವಾಮಾ ಜಿಲ್ಲೆಯ ಕೊಯಿಲ್, ಚಂದ್‌ಗಮ್, ಮಲಂಗ್‌ಪೋರಾ ಮತ್ತು ಸಂಬೂರಾ ಪ್ರದೇಶಗಳಲ್ಲಿಯೂ ದಾಳಿ ನಡೆಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಭಯೋತ್ಪಾದಕ ಜಾಲ ಮತ್ತು ಅದಕ್ಕೆ ಬೆಂಬಲ ನೀಡುವ ವ್ಯವಸ್ಥೆಗಳನ್ನು ಭೇದಿಸುವ ಪ್ರಯತ್ನಗಳ ಭಾಗವಾಗಿ ಜೆಇಐ ಸದಸ್ಯರು ಹಾಗೂ ಅವರ ಸಹಚರರಿಗೆ ಸೇರಿದ ಮನೆಗಳು, ಇತರ ತಾಣಗಳನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಎನ್‌ಐಎ ಅಧಿಕಾರಿಗಳು ಶೋಪಿಯಾನ್‌ನಲ್ಲಿರುವ ಮೌಲ್ವಿ ಇರ್ಫಾನ್‌ ಅಹ್ಮದ್‌ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಇರ್ಫಾನ್‌ ಅಹ್ಮದ್‌, ಫರೀದಾಬಾದ್‌ನ ಅಲ್‌–ಫಲಾಹ್ ವಿಶ್ವವಿದ್ಯಾಲಯದ ‘ವೈಟ್‌ ಕಾಲರ್‌’ ಭಯೋತ್ಪಾದನೆಯ ಜಾಲದ ಮಾಸ್ಟರ್ ಮೈಂಡ್ ಎಂದು ಗುರುತಿಸಲಾಗಿದೆ.

ನವೆಂಬರ್ 10ರಂದು ದೆಹಲಿಯ ಕೆಂಪುಕೋಟೆ ಬಳಿ ನಡೆದಿದ್ದ ಕಾರು ಸ್ಫೋಟದಲ್ಲಿ 15 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣ ಸಂಬಂಧ ಈವರೆಗೆ ಏಳು ಜನರನ್ನು ಬಂಧಿಸಲಾಗಿದೆ. ಜಮ್ಮು– ಕಾಶ್ಮೀರ ಮತ್ತು ಉತ್ತರ ಪ್ರದೇಶದಾದ್ಯಂತ ತನಿಖೆಯನ್ನು ವಿಸ್ತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.