
ಪುಲ್ವಾಮಾದ ಶಂಕಿತ ಆರೋಪಿ ಡಾ. ಉಮರ್ ನಬಿ ಮನೆ ಧ್ವಂಸ
(ಪಿಟಿಐ ಚಿತ್ರ)
ಶ್ರೀನಗರ: ದೆಹಲಿಯ ಕೆಂಪುಕೋಟೆ ಸಮೀಪ ನಡೆದ ಪ್ರಬಲ ಸ್ಫೋಟ ಪ್ರಕ ರಣದ ಪ್ರಮುಖ ಆರೋಪಿ ಡಾ. ಉಮರ್ ನಬಿಯ ಪುಲ್ವಾಮದಲ್ಲಿನ ಮನೆಯನ್ನು ಭದ್ರತಾ ಪಡೆಗಳು ನಿಯಂತ್ರಿತ ಸ್ಫೋಟಕ ಬಳಸಿ ನೆಲಸಮಗೊಳಿಸಿವೆ.
ಸ್ಫೋಟಗೊಂಡ ಹುಂಡೈ ಐ20 ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಉಮರ್ ಎಂಬುದನ್ನು ತನಿಖಾಧಿಕಾರಿಗಳು ಗುರುವಾರ ದೃಢಪಡಿಸಿದ್ದರು. ಕಾರಿನಲ್ಲಿ ದೊರೆತ ಛಿದ್ರಗೊಂಡ ದೇಹದ ಭಾಗಗಳು ಉಮರ್‌ನದ್ದೇ ಎಂಬುದು ಆತನ ತಾಯಿಯ ಡಿಎನ್‌ಎ ಹೊಂದಾಣಿಕೆಯಿಂದ ಖಚಿತವಾದ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆಸಲಾಗಿದೆ.
ಎರಡು ಅಂತಸ್ತಿನ ಮನೆ: ಕೋಯಿಲ್ ಗ್ರಾಮದಲ್ಲಿನ ಎರಡು ಅಂತಸ್ತಿನ ಮನೆಯನ್ನು ಗುರುವಾರ ಮಧ್ಯರಾತ್ರಿ ಮತ್ತು ಶುಕ್ರವಾರ ನಸುಕಿನಲ್ಲಿ ಕೆಡವಲಾಯಿತು. ಕಾರ್ಯಾಚರಣೆಗೆ ಅಡೆತಡೆ ಆಗದಂತೆ ಗ್ರಾಮದಲ್ಲಿ ಹೆಚ್ಚುವರಿ ಭದ್ರತೆ ಕಲ್ಪಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಭದ್ರತಾ ಪಡೆಗಳು ತೆಗೆದುಕೊಂಡಿದ್ದವು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಪ್ರತಿಭಾನ್ವಿತ ವ್ಯಕ್ತಿಯಾಗಿದ್ದ ಉಮರ್, ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದ ವೈದ್ಯನಾಗಿದ್ದ. ಆದರೆ ಎರಡು ವರ್ಷಗಳಿಂದ ಆತ ಮೂಲಭೂತ ವಾದದತ್ತ ವಾಲಿದ್ದ. ಅದಕ್ಕೆ ಸಂಬಂಧಿಸಿದ ಗುಂಪುಗಳ ಜತೆ ಸಂಪರ್ಕ ದಲ್ಲಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಅವರು ಹೇಳಿದ್ದಾರೆ.
ಉಗ್ರರ ಜಾಲದ ವಿರುದ್ಧ ಕಠಿಣ ಕ್ರಮ: ಈ ವರ್ಷ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಭೀಕರ ದಾಳಿಯಲ್ಲಿ 25 ಪ್ರವಾಸಿಗರು ಮೃತಪಟ್ಟ ನಂತರದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಜಾಲದ ವಿರುದ್ಧ ಭದ್ರತಾ ಪಡೆಗಳು ಈ ರೀತಿಯ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.
ಪಹಲ್ಗಾಮ್ ದಾಳಿಯ ಬಳಿಕ ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದಾದ್ಯಂತ ವ್ಯಾಪಕ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಗೆ ಚಾಲನೆ ನೀಡಿದ್ದರು. 2025ರ ಮೇ ಬಳಿಕ ಪುಲ್ವಾಮ, ಶೋಪಿಯಾನ್, ಕುಲ್ಗಾಂಗಳಲ್ಲಿ ಡಜನ್‌ಗೂ ಹೆಚ್ಚು ಮನೆಗಳನ್ನು ನೆಲಸಮ ಗೊಳಿಸಲಾಗಿದೆ. ಶಂಕಿತ ಉಗ್ರರಿಗೆ ಆಶ್ರಯ ನೀಡಿದ್ದ, ಅವರಿಗೆ ಸರಕು ಸರಂಜಾಮುಗಳನ್ನು ಒದಗಿಸಿದ್ದ ಅಥವಾ ಸಾರಿಗೆ ಸೌಕರ್ಯ ಕಲ್ಪಿಸಿದ್ದ ಆರೋಪಿಗಳ ಮನೆಗಳನ್ನು ಗುರಿಯಾಗಿಸಿ ಈ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.