ADVERTISEMENT

DelhiBlast: ಸ್ಫೋಟದಲ್ಲಿ ಮೃತಪಟ್ಟ ಟ್ಯಾಕ್ಸಿ ಚಾಲಕ, ಸೌಂದರ್ಯವರ್ಧಕ ಅಂಗಡಿ ಮಾಲೀಕ

ಪಿಟಿಐ
Published 11 ನವೆಂಬರ್ 2025, 10:26 IST
Last Updated 11 ನವೆಂಬರ್ 2025, 10:26 IST
<div class="paragraphs"><p>ದೆಹಲಿ ಕಾರು ಸ್ಫೋಟದಲ್ಲಿ ಮೃತಪಟ್ಟ ಪಂಕಜ್‌ ಸಹಾನಿ ಅವರ ಮೃತದೇಹವನ್ನು ಕುಟುಂಬಸ್ಥರು ಪಡೆದರು</p></div>

ದೆಹಲಿ ಕಾರು ಸ್ಫೋಟದಲ್ಲಿ ಮೃತಪಟ್ಟ ಪಂಕಜ್‌ ಸಹಾನಿ ಅವರ ಮೃತದೇಹವನ್ನು ಕುಟುಂಬಸ್ಥರು ಪಡೆದರು

   

ಪಿಟಿಐ ಚಿತ್ರ

ನವದೆಹಲಿ: ದೇಶವನ್ನೇ ಬೆಚ್ಚಿಬೀಳಿಸಿರುವ ದೆಹಲಿಯ ಕೆಂಪು ಕೋಟೆ ಬಳಿ ನಡೆದಿರುವ ಸ್ಫೋಟದಲ್ಲಿ 12 ಜನ ಮೃತಪಟ್ಟಿದ್ದು, ಕೆಲವರ ಗುರುತು ಪತ್ತೆಯಾಗಿದೆ.

ADVERTISEMENT

ಉತ್ತರ ಪ್ರದೇಶ ಮೂಲದ 18 ವರ್ಷದ ನುಮಾನ್‌ ಅನ್ಸಾರಿ ತನ್ನ ಅಂಗಡಿಗೆ ಸೌಂದರ್ಯವರ್ಧಕಗಳನ್ನು ಖರೀದಿಸಲು ಕೆಂಪುಕೋಟೆ ಬಳಿ ಬಂದಿದ್ದರು. ಇದೇ ವೇಳೆ ಕಾರು ಸ್ಫೋಟಗೊಂಡಿದೆ. ಕುಟುಂಬವನ್ನು ಸಲಹುವ ಜವಾಬ್ದಾರಿ ಹೊತ್ತಿದ್ದ ಅನ್ಸಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

‘ಅನ್ಸಾರಿ ಜತೆ ಬಂದಿದ್ದ ಸ್ನೇಹಿತ ತೀವ್ರವಾಗಿ ಗಾಯಗೊಂಡಿದ್ದು, ಲೋಕ ನಾಯಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಅನ್ಸಾರಿ ಅವರ ಸಂಬಂಧಿ ಪಿಟಿಐಗೆ ತಿಳಿಸಿದ್ದಾರೆ. 

ಸ್ಫೋಟದಲ್ಲಿ ಮೃತಪಟ್ಟ ಇತರರನ್ನು ಅಮ್ರೋಹಾ ಜಿಲ್ಲೆಯ 34 ವರ್ಷದ ಡಿಟಿಸಿ (ದೆಹಲಿ ಸಾರಿಗೆ ನಿಗಮ) ಕಂಡಕ್ಟರ್‌ ಅಶೋಕ್‌ ಕುಮಾರ್, 22 ವರ್ಷದ ಟ್ಯಾಕ್ಸಿ ಚಾಲಕ ಪಂಕಜ್‌ ಸಹಾನಿ ಎಂದು ಗುರುತಿಸಲಾಗಿದೆ.

ವರದಿ ಪ್ರಕಾರ, ಅಮ್ರೋಹಾ ಜಿಲ್ಲೆಯ ಲೋಕೇಶ್‌ ಅಗರ್ವಾಲ್ ಮತ್ತು ಅಶೋಕ್ ಅಗರ್ವಾಲ್‌ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.

ಇವರಲ್ಲದೆ, ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಮೂಲದ ದಿನೇಶ್ ಮಿಶ್ರಾ, ಮೀರತ್‌ ಮೂಲದ ಆಟೋ ರಿಕ್ಷಾ ಚಾಲಕ ಮೌಸಿನ್‌ ಎನ್ನುವವರೂ ಮೃತಪಟ್ಟಿದ್ದಾರೆ.

ಸದಾ ಜನದಟ್ಟಣೆಯಿಂದ ಕೂಡಿರುವ ಐತಿಹಾಸಿಕ ಕೆಂಪುಕೋಟೆಯ ಬಳಿ ಚಲಿಸುತ್ತಿದ್ದ ಹುಂಡೈ ಐ–20 ಕಾರಿನಲ್ಲಿ ಸೋಮವಾರ ಸಂಜೆ ಭಾರಿ ಸ್ಫೋಟ ಸಂಭವಿಸಿ 12 ಮಂದಿ ಮೃತಪಟ್ಟಿದ್ದಾರೆ. 24ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಘಟನೆಯ ಬಗ್ಗೆ ದೆಹಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯ್ದೆ (ಯುಎಪಿಎ) ಹಾಗೂ ಸ್ಫೋಟಕ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದು ತನಿಖೆ ಆರಂಭಿಸಿದ್ದಾರೆ. 

ಇನ್ನೊಂದೆಡೆ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದ ಗೃಹ ಸಚಿವ ಅಮಿತ್‌ ಶಾ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.