ADVERTISEMENT

ದೆಹಲಿ ಚಲೋಗೆ ಹಲವು ಅಡ್ಡಿ: ಮುಳ್ಳಿನ ಬೇಲಿ, ಡ್ರೋನ್‌ ಕಣ್ಗಾವಲು

ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಹಲವು ಹಂತದ ಬ್ಯಾರಿಕೇಡ್‌, ಮುಳ್ಳಿನ ಬೇಲಿ । ಡ್ರೋನ್‌ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 16:10 IST
Last Updated 12 ಫೆಬ್ರುವರಿ 2024, 16:10 IST
ಸಿಂಘು ಗಡಿ ಸಮೀಪದ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲು ಕಂಟೈನರ್‌ಗಳನ್ನು ಸಾಗಿಸಲಾಯಿತು –ಪಿಟಿಐ ಚಿತ್ರ
ಸಿಂಘು ಗಡಿ ಸಮೀಪದ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲು ಕಂಟೈನರ್‌ಗಳನ್ನು ಸಾಗಿಸಲಾಯಿತು –ಪಿಟಿಐ ಚಿತ್ರ   

ನವದೆಹಲಿ: ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 200 ರೈತ ಸಂಘಟನೆಗಳು ಮಂಗಳವಾರ (ಫೆ.13) ‘ದೆಹಲಿ ಚಲೊ’ ಹಮ್ಮಿಕೊಂಡಿವೆ. ಆದರೆ, ಅನ್ನದಾತರ ಪ್ರತಿಭಟನೆ ತಡೆಯಲು ಸರ್ಕಾರಗಳು ಶತ ಪ್ರಯತ್ನ ಮಾಡಿವೆ.

ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ ಭಾಗಗಳಿಂದ ಭಾರಿ ಸಂಖ್ಯೆಯ ರೈತರು ದೆಹಲಿಯತ್ತ ಧಾವಿಸಲು ಮುಂದಾಗಿದ್ದಾರೆ. ಆದರೆ ಅವರು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸದಂತೆ ತಡೆಯಲು ಸಿಂಘು, ಟಿಕ್ರಿ, ಗಾಜೀಪುರ ಗಡಿಯಲ್ಲಿ ಹಲವು ಹಂತದ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ರಸ್ತೆಗಳಿಗೆ ಅಡ್ಡಲಾಗಿ ಮುಳ್ಳು ತಂತಿ, ಮೊಳೆಗಳ ಪಟ್ಟಿ, ಸಿಮೆಂಟ್‌ ಇಟ್ಟಿಗೆ ಮತ್ತು ಕಂಟೈನರ್‌ಗಳನ್ನು ಇಡಲಾಗಿದೆ. ಜೊತೆಗೆ ಬೃಹತ್‌ ಸಂಖ್ಯೆಯ ಪೊಲೀಸ್‌ ಮತ್ತು ಅರೆಸೇನಾಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಹಲವು ಅಹವಾಲುಗಳನ್ನು ಹೊತ್ತ ಅನ್ನದಾತರ ಪ್ರತಿಭಟನೆಗೆ ಭಾರಿ ಅಡ್ಡಿಗಳು ಎದುರಾಗಿದ್ದು, 2020ರಲ್ಲಿ ನಡೆದಿದ್ದ ‘ರೈತರ ಆಂದೋಲನ’ವನ್ನು ನೆನಪಿಸುವಂತಿದೆ.

ADVERTISEMENT

‘ಗಡಿಗಳಲ್ಲಿ ಡ್ರೋನ್‌ ಕಣ್ಗಾವಲಿಡಲಾಗಿದೆ. ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಪೊಲೀಸರು ಸಿದ್ಧರಾಗಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಚಂಡೀಗಢ ಮತ್ತು ಪಂಜಾಬ್‌ನ ಗಡಿಗಳಲ್ಲಿ ವಾಹನಗಳ ಸಂಚಾರಕ್ಕೆ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಸಿಂಘು ಗಡಿಯಲ್ಲಿ ಸೋಮವಾರದಿಂದಲೇ ವಾಣಿಜ್ಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಮಂಗಳವಾರದ ನಂತರ ಎಲ್ಲಾ ರೀತಿಯ ವಾಹನಗಳಿಗೆ ನಿರ್ಬಂಧ ಹೇರಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಹರಿಯಾಣ ಅಧಿಕಾರಿಗಳು ಅಂಬಾಲಾ, ಜಿಂದ್‌, ಫತೇಹಾಬಾದ್‌ ಮತ್ತು ಕುರುಕ್ಷೇತ್ರದಲ್ಲಿ ಗಡಿಗಳಲ್ಲಿ ಸಿಮೆಂಟ್‌ ಇಟ್ಟಿಗೆ, ಕಬ್ಬಿಣದ ಮೊಳೆಗಳ ಪಟ್ಟಿಗಳನ್ನು ಅಡ್ಡಲಾಗಿ ಇರಿಸುವ ಮೂಲಕ ಮೂಲಕ ನಿರ್ಬಂಧಿಸಿದ್ದಾರೆ. ಅಲ್ಲದೆ ರಾಜ್ಯದ 15 ಜಿಲ್ಲೆಗಳಲ್ಲಿ ಸೆಕ್ಷನ್‌ 144ರ ಅಡಿಯಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ.

ಅಂಬಾಲಾ, ಕುರುಕ್ಷೇತ್ರ, ಕೈತಾಲ್‌, ಜಿಂದ್, ಹಿಸಾರ್‌, ಫತೇಹಾಬಾದ್‌ ಮತ್ತು ಸಿರ್ಸಾದಲ್ಲಿ ಫೆ.13ರವರೆಗೆ ಇಂಟರ್ನೆಟ್‌ ಮತ್ತು ಎಸ್‌ಎಂಎಸ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಹರಿಯಾಣದ ಗಡಿ ಗ್ರಾಮಗಳ ರಸ್ತೆಗಳನ್ನೂ ಮುಚ್ಚಲಾಗಿದೆ. ದೆಹಲಿ–ರೋಹ್ಟಕ್ ಮತ್ತು ದೆಹಲಿ– ಬಹದೂರ್‌ಗಢ ರಸ್ತೆಗಳಲ್ಲಿ ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಅಂಗಡಿ ಮಾಲೀಕರಿಗೆ ಆತಂಕ:

ಟಿಕ್ರಿ ಗಡಿಯಲ್ಲಿ ಪೊಲೀಸರು ಐದು ಹಂತದ ಬ್ಯಾರಿಕೇಡ್‌ ಹಾಕುತ್ತಿದ್ದಂತೆಯೇ ಸ್ಥಳೀಯ ಅಂಗಡಿಗಳ ಮಾಲೀಕರು ಆತಂಕಗೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ರೈತರು ಪ್ರತಿಭಟನೆ ನಡೆಸಿದಾಗ ಅಂಗಡಿಗಳನ್ನು ಮುಚ್ಚಿ ಭಾರಿ ಆರ್ಥಿಕ ಬಿಕ್ಕಟ್ಟು ಎದುರಾಗಿತ್ತು. ಈ ಬಾರಿಯೂ ಅಂಥದ್ದೇ ಪರಿಸ್ಥಿತಿ ಎದುರಾಗಲಿದೆಯೇ ಎಂದು ಅವರು ಆತಂಕಕ್ಕೆ ಒಳಗಾಗಿದ್ದಾರೆ.

ಸಮೀಪದಲ್ಲಿ ದುಡಿಯುವ ಕಾರ್ಮಿಕರೇ ನಮ್ಮ ಗ್ರಾಹಕರು. ಈ ರೀತಿ ಭದ್ರತೆ ಕೈಗೊಳ್ಳುವುದರಿಂದ ಮುಖ್ಯ ರಸ್ತೆಯಲ್ಲಿ ಸಂಚಾರ ವಿರಳವಾಗುತ್ತದೆ. ಇದರಿಂದ ನಮ್ಮ ವ್ಯಾಪಾರ ಕಡಿಮೆಯಾಗುತ್ತದೆ ಎನ್ನುತ್ತಾರೆ ಅಂಗಡಿಯೊಂದರ ಮಾಲೀಕ ಕೃಷ್ಣ ಕುಮಾರ್‌.

2020ರಲ್ಲಿ ಏನಾಗಿತ್ತು?

ಕೇಂದ್ರ ಸರ್ಕಾರ ಜಾರಿ ತಂದಿದ್ದ, ಸದ್ಯ ವಾಪಸ್‌ ಪಡೆದಿರುವ ಮೂರು ಕೃಷಿ ಕಾಯ್ದೆ ವಿರೋಧಿಸಿ, 2020ರಲ್ಲಿ ಪಂಜಾಬ್ ಮತ್ತು ಹರಿಯಾಣ ಮತ್ತು ಉತ್ತರ ಪ್ರದೇಶದ ಅಪಾರ ಸಂಖ್ಯೆಯ ರೈತರು ದೆಹಲಿಯತ್ತ ಹೊರಟಿದ್ದರು. ಆದರೆ ಪ್ರವೇಶಕ್ಕೆ ತಡೆಯೊಡ್ಡಿದ್ದರಿಂದ ರೈತರು ದೆಹಲಿಯ ಸಿಂಘು, ಟಿಕ್ರಿ ಮತ್ತು ಗಾಜೀಪುರ ಗಡಿಯಲ್ಲಿಯೇ ಸುದೀರ್ಘ ಒಂದು ವರ್ಷ ಪ್ರತಿಭಟನೆ ನಡೆಸಿದ್ದರು.

ಚಳಿ, ಮಳೆಗೂ ಬಗ್ಗದೆ ನಡೆಸಿದ್ದ ಆಂದೋಲನಕ್ಕೆ ಮಣಿದ ಕೇಂದ್ರ ಸರ್ಕಾರ 2021ರ ನವೆಂಬರ್‌ನಲ್ಲಿ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದು, ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಕಾಯ್ದೆಯ ಬಲ ನೀಡುವ ಭರವಸೆ ನೀಡಿತ್ತು. ಈ ದಿಸೆಯಲ್ಲಿ ಕೆಲಸ ಮಾಡಲು ಸಮಿತಿಯೊಂದನ್ನು ರಚಿಸುವುದರ ಕುರಿತು ಕೃಷಿ ಸಚಿವಾಲಯವು 2022ರಲ್ಲಿ ಅಧಿಸೂಚನೆಯನ್ನೂ ಹೊರಡಿಸಿತ್ತು. ರೈತರಿಗೆ ಎಂಎಸ್‌ಪಿ ದೊರೆಯುವುದಕ್ಕೆ ಬೇಕಾದ ಕ್ರಮಗಳನ್ನು ಈ ಸಮಿತಿಯು ಶಿಫಾರಸು ಮಾಡಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿತ್ತು. ಸಮಿತಿಯಲ್ಲಿ ಮೂರು ಸ್ಥಾನಗಳನ್ನು ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಸದಸ್ಯರಿಗೆ ಮೀಸಲು ಇರಿಸಲಾಗಿತ್ತು. ಆದರೆ, ಸಮಿತಿಯ ಕಾರ್ಯಸೂಚಿಯಲ್ಲಿ ಎಂಎಸ್‌ಪಿ ಖಾತರಿಗೆ ಕಾಯ್ದೆ ತರುವ ಪ್ರಸ್ತಾಪವೇ ಇಲ್ಲ ಎಂದು ಎಸ್‌ಕೆಎಂ ಇದನ್ನು ತಿರಸ್ಕರಿಸಿತ್ತು. 

ರೈತರ ಪ್ರತಿಭಟನಾ ಮೆರವಣಿಗೆಯನ್ನು ತಡೆಯಲು ಸಿಂಘು ಗಡಿಯಲ್ಲಿ ಹಲವು ಹಂತದಲ್ಲಿ ಮುಳ್ಳು ತಂತಿ ಮತ್ತು ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ –ಪಿಟಿಐ ಚಿತ್ರ
ರೈತರ ಪ್ರತಿಭಟನಾ ಮೆರವಣಿಗೆಯನ್ನು ತಡೆಯಲು ಸಿಂಘು ಗಡಿಯಲ್ಲಿ ಹಲವು ಹಂತದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ –ಪಿಟಿಐ ಚಿತ್ರ
ನಾನು ಮುಖ್ಯಮಂತ್ರಿಯಾಗಿದ್ದಾಗ ₹2 ಲಕ್ಷದ ವರೆಗೆ ರೈತರ ಸಾಲ ಮನ್ನಾ ಮಾಡಿದ್ದೆ. ಹಾಗಿದ್ದಾಗ 10 ವರ್ಷಗಳಿಂದ ಅಧಿಕಾರದಲ್ಲಿ ಇರುವ ಬಿಜೆಪಿ ಸರ್ಕಾರಕ್ಕೆ ರೈತರ ಸಾಲಮನ್ನಾ ಮಾಡಲು ಏಕೆ ಸಾಧ್ಯವಿಲ್ಲ?
ಉದ್ಧವ್‌ ಠಾಕ್ರೆ ಶಿವಸೇನಾ (ಉದ್ಧವ್‌ ಬಣ) ನಾಯಕ 
ರೈತರ ಪ್ರತಿಭಟನಾ ಮೆರವಣಿಗೆ ಹತ್ತಿಕ್ಕಲು ಸರ್ಕಾರ ಕೈಗೊಂಡಿರುವ ಕ್ರಮಗಳು ವಸಹಾತುಶಾಹಿ ಕಾಲಕ್ಕಿಂತ ಉಗ್ರವಾಗಿವೆ. ಸರ್ಕಾರ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಲಿ.
ಗೋಪಾಲ್‌ ರೈ ಎಎಪಿಯ ದೆಹಲಿ ಸಂಚಾಲಕ

ಕರ್ನಾಟಕದ ರೈತರಿಗೆ ತಡೆ :

ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ದೆಹಲಿಯತ್ತ  ಹೊರಟಿದ್ದ ಕರ್ನಾಟಕದ ಸುಮಾರು 70 ರೈತರನ್ನು ಭೋಪಾಲ್ ರೈಲು ನಿಲ್ದಾಣದಲ್ಲಿ ಮಧ್ಯಪ್ರದೇಶದ ರೈಲ್ವೆ ಪೊಲೀಸರು ಸೋಮವಾರ ಮುಂಜಾನೆ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ರೈಲಿನಿಂದ ಇಳಿಯುವಂತೆ ಪೊಲೀಸರು ಒತ್ತಾಯಿಸಿದ ನಂತರ ರೈತರು ಧರಣಿ ಕುಳಿತು ಘೋಷಣೆ ಕೂಗಿದರು. ನಂತರ ಅವರನ್ನು ಕೆಳಗಿಳಿಸಿ ಬಂಧಿಸಲಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು. ರೈತರನ್ನು ‘ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌’ ರೈಲಿನಿಂದ ಇಳಿಸಿ ಜಿಲ್ಲಾಧಿಕಾರಿಗಳ ವಶಕ್ಕೆ ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ದೆಹಲಿಯಲ್ಲಿ ಒಂದು ತಿಂಗಳು ನಿಷೇದಾಜ್ಞೆ:

ರೈತ ಚಳವಳಿಗೆ ತಡೆಯೊಡ್ಡಲು ರಾಷ್ಟ್ರ ರಾಜಧಾನಿಯಲ್ಲಿ ಸಿಆರ್‌ಪಿಸಿ ಸೆಕ್ಷನ್‌ 144ರ ಅಡಿಯಲ್ಲಿ ಒಂದು ತಿಂಗಳ ಕಾಲ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಗುಂಪುಗೂಡುವಿಕೆ ಮೆರವಣಿಗೆ ಅಥವಾ ರ‍್ಯಾಲಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಟ್ರ್ಯಾಕ್ಟರ್‌ಗಳ ಪ್ರವೇಶಕ್ಕೂ ನಿರ್ಬಂಧ ಜಾರಿ ಮಾಡಲಾಗಿದೆ. ದೆಹಲಿ ಪೊಲೀಸ್‌ ಆಯುಕ್ತ ಸಂಜಯ್‌ ಅರೋರಾ ಅವರು ಈ ಆದೇಶ ಹೊರಡಿಸಿದ್ದಾರೆ. ಆದೇಶವು ಫೆ.12ರಿಂದಲೇ ಅನ್ವಯವಾಗಿ ಮಾರ್ಚ್‌ 12ರವರೆಗೂ ಜಾರಿಯಲ್ಲಿರಲಿದೆ. ಇಟ್ಟಿಗೆ ಕಲ್ಲು ಆ್ಯಸಿಡ್ ಇತರ ಅಪಾಯಕಾರಿ ದ್ರವ ಪೆಟ್ರೋಲ್‌ ಸೋಡಾ ನೀರು ಬಾಟಲಿ ಅಥವಾ ಮಾನವ ಜೀವಕ್ಕೆ ಅಪಾಯವನ್ನು ಉಂಟುಮಾಡುವ ಯಾವುದೇ ವಸ್ತುಗಳ ಸಂಗ್ರಹ ಮತ್ತು ರವಾನೆಗೆ ನಿಷೇಧ ಹೇರಲಾಗಿದೆ.

ರೈತರ ಬೇಡಿಕೆ ಏನು?

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸಲು ಕಾನೂನು ರೂಪಿಸಬೇಕು ಸ್ವಾಮಿನಾಥನ್‌ ಆಯೋಗದ ವರದಿ ಅನುಷ್ಠಾನ ಮಾಡಬೇಕು ರೈತರು ಮತ್ತು ಕೂಲಿ ಕಾರ್ಮಿಕರಿಗೆ ಪಿಂಚಣಿ ನೀಡಬೇಕು ಕೃಷಿ ಸಾಲ ಮನ್ನಾ ಮಾಡಬೇಕು ರೈತರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಬೇಕು ಲಖೀಂಪುರ ಖೀರಿ ಹಿಂಸಾಚಾರ ಪ್ರಕರಣದ ಸಂತ್ರಸ್ತರಿಗೆ ‘ನ್ಯಾಯ’ ದೊರಕಿಸಿಕೊಡಬೇಕು

ರೈತರ ಬಿಡುಗಡೆಗೆ ಆಗ್ರಹ

ಚಂಡೀಗಢ: ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕ ಮಧ್ಯ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸುತ್ತಿದ್ದ ರೈತರನ್ನು ಬಂಧಿಸಲಾಗಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ರೈತ ನಾಯಕ ಜಗಜೀತ್‌ ಸಿಂಗ್‌ ಡಲ್ಲೇವಾಲ್‌ ಆಗ್ರಹಿಸಿದ್ದಾರೆ. ‘ಒಂದು ಕಡೆ ಅವರು (ಕೇಂದ್ರ ಸರ್ಕಾರ) ನಮ್ಮೊಂದಿಗೆ ಮಾತುಕತೆ ನಡೆಸುತ್ತಾರೆ. ಇನ್ನೊಂದೆಡೆ ನಮ್ಮವರನ್ನೇ ಬಂಧಿಸುತ್ತಾರೆ. ಹೀಗಿದ್ದಾಗ ಮಾತುಕತೆ ಫಲಪ್ರದವಾಗುವುದು ಹೇಗೆ? ಸರ್ಕಾರ ಮಾತುಕತೆಗೆ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಬೇಕು’ ಎಂದರು. ಅಖಿಲ ಭಾರತ ಕಿಸಾನ್ ಸಭಾ ಸಹ ರೈತರು ಮತ್ತು ಹೋರಾಟಗಾರರ ಬಂಧನವನ್ನು ಖಂಡಿಸಿದೆ. ‘100 ರೈತರಿಗೆ ಅಡ್ಡಿ’: ಕರ್ನಾಟಕದ ಸುಮಾರು 100 ರೈತರನ್ನು ಮಧ್ಯಪ್ರದೇಶದ ಪೊಲೀಸರು ಭೋಪಾಲ್‌ ಬಳಿ ತಡೆದಿದ್ದಾರೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ತಿಳಿಸಿದೆ.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌ಕೆಎಂನ ದಕ್ಷಿಣ ಭಾರತದ ಸಂಚಾಲಕ ಶಾಂತಕುಮಾರ್‌ ಅವರು ರೈತರೊಂದಿಗೆ ನಾನೂ ಸಂಚರಿಸುತ್ತಿದ್ದೆ. ಭೋಪಾಲ್‌ ರೈಲು ನಿಲ್ದಾಣದಲ್ಲಿ ಪೊಲೀಸರು ನಮ್ಮನ್ನು ತಡೆದರು. ಈ ಸಂದರ್ಭದಲ್ಲಿ ಕೆಲ ರೈತರು ಗಾಯಗೊಂಡಿದ್ದಾರೆ ಎಂದು ಹೇಳಿದರು. ಶಾಂತಕುಮಾರ್‌ ಅವರು ರಾಷ್ಟ್ರರಾಜಧಾನಿಯನ್ನು ತಲುಪಿದ್ದಾರೆ.

ಹೈಕೋರ್ಟ್‌ಗೆ ಮೊರೆ

ಚಂಡೀಗಢ: ರೈತರ ಪ್ರತಿಭಟನಾ ರ‍್ಯಾಲಿ ತಡೆಯಲು ಹರಿಯಾಣ ಸರ್ಕಾರ ಗಡಿಗಳನ್ನು ಮುಚ್ಚಿರುವುದು ಮತ್ತು ಇಂಟರ್‌ನೆಟ್‌ ಸೇವೆ ಸ್ಥಗಿತ ಮಾಡಿರುವುದನ್ನು ಪ್ರಶ್ನಿಸಿ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಸೋಮವಾರ ಅರ್ಜಿ ಸಲ್ಲಿಸಲಾಗಿದೆ. ರೈತರ ಪ್ರತಿಭಟನೆ ವಿರುದ್ಧ ಪಂಜಾಬ್‌ ಹರಿಯಾಣ ಮತ್ತು ಕೇಂದ್ರ ಸರ್ಕಾರಗಳು ಕೈಗೊಂಡಿರುವ ಕ್ರಮಗಳನ್ನು ಕೂಡಲೇ ರದ್ದು ಮಾಡಬೇಕು ಎಂದು ಅರ್ಜಿದಾರ ಉದಯ್ ಪ್ರತಾಪ್‌ ಸಿಂಗ್ ಮನವಿ ಮಾಡಿದ್ದಾರೆ.   ಮಂಗಳವಾರ ಅರ್ಜಿ ವಿಚಾರಣೆ ನಡೆಯುವ ನಿರೀಕ್ಷೆ ಇದೆ.

‘ಪ್ರಮುಖ ಸಮಸ್ಯೆ ಇತ್ಯರ್ಥ ಮಾಡಬಹುದು’

ಚಂಡೀಗಢ: ರೈತರ ಪ್ರಮುಖ ಸಮಸ್ಯೆಯನ್ನು ಮಾತುಕತೆ ಮೂಲಕ ಇತ್ಯರ್ಥ ಮಾಡಬಹುದು ಎಂದು ಹರಿಯಾಣ ಗೃಹ ಸಚಿವ ಅನಿಲ್‌ ವಿಜ್‌ ತಿಳಿಸಿದರು. ರೈತರು ನಮ್ಮ ಅನ್ನದಾತರು. ಅವರು ದೇಶದ 140 ಕೋಟಿ ಜನರಿಗೆ ಅನ್ನ ನೀಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಬಡವರು ಯುವಜನರು ಮಹಿಳೆಯರು ಮತ್ತು ರೈತರ ಏಳಿಗೆಯತ್ತ ಗಮನ ಹರಿಸಿದೆ ಎಂದು ಹೇಳಿದರು. ಹರಿಯಾಣ–ಪಂಜಾಬ್‌ ಗಡಿಗಳಲ್ಲಿ ಬ್ಯಾರಿಕೇಡ್ ಅಳವಡಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ‘ರಾಜ್ಯದ ಜನರ ಸುರಕ್ಷತೆ ಮತ್ತು ಶಾಂತಿಗಾಗಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.