ADVERTISEMENT

ಕೋವಿಡ್ ಲಸಿಕೆ ಹಾಕಿಸಿಕೊಂಡ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ಏಜೆನ್ಸೀಸ್
Published 4 ಮಾರ್ಚ್ 2021, 7:24 IST
Last Updated 4 ಮಾರ್ಚ್ 2021, 7:24 IST
ಕೋವಿಡ್ ಲಸಿಕೆ ಹಾಕಿಸಿಕೊಂಡ ಅರವಿಂದ್ ಕೇಜ್ರಿವಾಲ್ (ಚಿತ್ರ ಕೃಪೆ: ಪಿಟಿಐ)
ಕೋವಿಡ್ ಲಸಿಕೆ ಹಾಕಿಸಿಕೊಂಡ ಅರವಿಂದ್ ಕೇಜ್ರಿವಾಲ್ (ಚಿತ್ರ ಕೃಪೆ: ಪಿಟಿಐ)   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಗುರುವಾರದಂದು ಕೋವಿಡ್-19 ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡರು.

52 ವರ್ಷದ ಕೇಜ್ರಿವಾಲ್ ಕಳೆದ 10 ವರ್ಷಗಳಿಂದ ಮಧುಮೇಹಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಎರಡನೇ ಹಂತದ ಕೋವಿಡ್ ಲಸಿಕಾ ಅಭಿಯಾನದಲ್ಲಿ ವ್ಯಾಕ್ಸಿನೇಷನ್ ಪಡೆಯಲು ಅರ್ಹರಾಗಿದ್ದಾರೆ.

ಇದೇ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಹೆತ್ತವರು ಸಹ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡರು.

ADVERTISEMENT

'ನನ್ನ ಹೆತ್ತವರು ಮತ್ತು ನಾನು ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ 'ಕೋವಿಶೀಲ್ಡ್' ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದೇವೆ. ಲಸಿಕೆ ಪಡೆದ ಬಳಿಕ ನಮಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಹೆತ್ತವರು ಆರೋಗ್ಯವಾಗಿದ್ದಾರೆ. ಕೋವಿಡ್ ಲಸಿಕೆ ಪಡೆಯಲು ಅರ್ಹರಾದವರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುವಂತೆ ವಿನಂತಿ ಮಾಡುತ್ತೇನೆ. ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯವಿದೆ. ಭಯಪಡುವ ಅಗತ್ಯವಿಲ್ಲ. ಜನರ ಮನಸ್ಸಿನಲ್ಲೀಗ ಯಾವುದೇ ಅನುಮಾನಗಳಿಲ್ಲ' ಎಂದು ಹೇಳಿದರು.

ಕೇಂದ್ರ ಸರ್ಕಾರದೊಂದಿಗೆ ನಾವು ಸಂಪರ್ಕದಲ್ಲಿದ್ದು, ಅಗತ್ಯವಿದ್ದರೆ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಹೆಚ್ಚಿಸಲಿದ್ದೇವೆ ಎಂದವರು ತಿಳಿಸಿದರು.

2021 ಜನವರಿ 16ರಂದು ದೇಶದಾದ್ಯಂತ ಕೋವಿಡ್ ಲಸಿಕೆ ವಿತರಣೆಯನ್ನು ಪ್ರಾರಂಭಿಸಲಾಗಿತ್ತು. ಮೊದಲ ಹಂತದಲ್ಲಿ ಮುಂಚೂಣಿಯ ಸೇನಾನಿಗಳಿಗೆ ಕೋವಿಡ್ ಲಸಿಕೆ ವಿತರಿಸಲಾಗಿತ್ತು.

ಮಾರ್ಚ್ 1ರಂದು ಪ್ರಧಾನಿ ಮೋದಿ ಕೋವಿಡ್ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡರು. ಈ ಮೂಲಕ ಎರಡನೇ ಹಂತದ ಕೋವಿಡ್ ಲಸಿಕಾ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದರು.

ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರು ಹಾಗೂ ಇತರ ಗಂಭೀರ ಕಾಯಿಲೆಗಳಿಂದ ಬಳಲುವ, 45 ವರ್ಷಕ್ಕೂ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರೋಗ್ಯ ಸಚಿವ ಹರ್ಷ ವರ್ಧನ್ ಸೇರಿದಂತೆ ಅನೇಕ ಗಣ್ಯರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.