ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಕಪಿಲ್ ಮಿಶ್ರಾ, ರವೀಂದರ್ ಇಂದ್ರಜ್ ಸಿಂಗ್, ಪರ್ವೇಶ್ ವರ್ಮಾ, ಆಶೀಶ್ ಸೂದ್, ಮಂಜಿಂದರ್ ಸಿಂಗ್ ಸಿರ್ಸಾ, ಪಂಕಜ್ ಕುಮಾರ್ ಸಿಂಗ್
ಪಿಟಿಐ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 27 ವರ್ಷಗಳ ಬಳಿಕ ಅಧಿಕಾರದ ಗದ್ದುಗೆ ಹಿಡಿದಿರುವ ಕಮಲ ಪಾಳಯವು ನೂತನ ಸಂಪುಟ ಸಚಿವರಿಗೆ ಗುರುವಾರ ಸಂಜೆ ಖಾತೆ ಹಂಚಿಕೆ ಮಾಡಲಾಗಿದೆ.
ಮುಖ್ಯಮಂತ್ರಿ ರೇಖಾ ಗುಪ್ತಾ ಸಹಿತ ಏಳು ಶಾಸಕರು ಸಚಿವರಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರನ್ನು ಸೋಲಿಸಿರುವ ಪರ್ವೇಶ್ ವರ್ಮಾ ಅವರಿಗೆ ಲೋಕೋಪಯೋಗಿ, ನೀರು, ಸಂಸದೀಯ ವ್ಯವಹಾರ, ನೀರಾವರಿ ಮತ್ತು ನೆರೆ ನಿರ್ವಹಣೆ ಖಾತೆ ನೀಡಲಾಗಿದೆ.
ಆಶೀಶ್ ಸೂದ್ ಅವರಿಗೆ ಗೃಹ ಖಾತೆಯ ಜತೆಗೆ ಇಂಧನ, ನಗರಾಭಿವೃದ್ಧಿ ಹಾಗೂ ಶಿಕ್ಷಣ ಖಾತೆಯ ಹೊಣೆ ನೀಡಲಾಗಿದೆ. ಮಂಜಿಂದರ್ ಸಿಂಗ್ ಸಿರ್ಸಾ ಅವರಿಗೆ ಕೈಗಾರಿಕೆ ಮತ್ತು ಪರಿಸರ ಖಾತೆ, ರವೀಂದರ್ ಇಂದ್ರಜ್ ಸಿಂಗ್ ಅವರಿಗೆ ಸಮಾಜ ಕಲ್ಯಾಣ, ಕಪಿಲ್ ಮಿಶ್ರಾ ಅವರಿಗೆ ಕಾನೂನು ಮತ್ತು ನ್ಯಾಯ, ಕಾರ್ಮಿಕ ಇಲಾಖೆ ಹಂಚಿಕೆ ಮಾಡಲಾಗಿದೆ. ಪಂಕಜ್ ಮಿಶ್ರಾ ಅವರಿಗೆ ಆರೋಗ್ಯ, ಸಾರಿಗೆ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಹಂಚಿಕೆ ಮಾಡಿ ಮುಖ್ಯಮಂತ್ರಿ ರೇಖಾ ಗುಪ್ತಾ ಆದೇಶ ಹೊರಡಿಸಿದ್ದಾರೆ.
ನೂತನ ಸಂಪುಟದಲ್ಲಿ ಬಿಜೆಪಿಯು ಎಲ್ಲ ಪ್ರಮುಖ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ಪ್ರಯತ್ನ ಮಾಡಿದೆ. ಗುಪ್ತಾ ಅವರು ವೈಶ್ಯ ಸಮುದಾಯಕ್ಕೆ ಸೇರಿದವರಾಗಿದ್ದರೂ, ಸಚಿವರಲ್ಲಿ ಜಾಟ್, ಸಿಖ್, ದಲಿತ, ಬ್ರಾಹ್ಮಣ, ಪಂಜಾಬಿಗಳು ಇದ್ದಾರೆ. ಇಬ್ಬರು ಪೂರ್ವಾಂಚಲಿಗಳು.
ಆರು ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡುವಾಗ ಪಕ್ಷವು ಹಲವಾರು ಅಂಶಗಳನ್ನು ಪರಿಗಣಿಸಿದೆ. ಹಿರಿಯ ನಾಯಕರಾದ ವಿಜೇಂದರ್ ಗುಪ್ತಾ ಮತ್ತು ಮೋಹನ್ ಸಿಂಗ್ ಬಿಸ್ತ್ ಮುಂದಿನ ಸಭಾಧ್ಯಕ್ಷ ಹಾಗೂ ಉಪಸಭಾಧ್ಯಕ್ಷರಾಗುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.