ನವದೆಹಲಿ: ನನ್ನ ಮಗ ಬೀದಿನಾಯಿಗಳ ಮೇಲಿನ ಪ್ರೀತಿಯಿಂದ ದೆಹಲಿ ಸಿಎಂ ರೇಖಾ ಗುಪ್ತಾ ಅವರ ಮೇಲೆ ದಾಳಿ ಮಾಡಿದ್ದಾನೆ ಎಂದು ದಾಳಿಯ ಆರೋಪಿ ರಾಜೇಶ್ ಖಿಮ್‌ಜಿ ಅವರ ತಾಯಿ ಭಾನು ಬೆನ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಬೀದಿನಾಯಿಗಳನ್ನು ಎಳೆದೊಯ್ಯುತ್ತಿರುವ ವಿಡಿಯೊ ನೋಡಿ ವಿಚಲಿತಗೊಂಡಿದ್ದ ಮಗ, ಉಜ್ಜಯಿನಿ ಹೋಗುವುದಾಗಿ ಹೇಳಿ ಮನೆ ತೊರೆದಿದ್ದ ಎಂದು ಅವರು ತಿಳಿಸಿದ್ದಾರೆ.
ನನ್ನ ಮಗ ರಿಕ್ಷಾ ಚಾಲಕನಾಗಿದ್ದು, ನಾವು ಬಡವರು. ಹಾಗಾಗಿ, ನನ್ನ ಮಗನನ್ನು ಕ್ಷಮಿಸಿ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾಗೆ ಮನವಿ ಮಾಡಿದ್ದಾರೆ.
ಎಎನ್‌ಐ ಜೊತೆ ಮಾತನಾಡಿರುವ ಭಾನು ಬೆನ್, ನನ್ನ ಮಗ ಮಹಾದೇವನ ಭಕ್ತ. ಉಜ್ಜಯಿನಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದನು. ತಿಂಗಳಿಗೊಮ್ಮೆಯಾದರೂ ಅಲ್ಲಿಗೆ ಭೇಟಿ ನೀಡುತ್ತಾನೆ. ಉಜ್ಜಯಿನಿಯಿಂದ ದೆಹಲಿಗೆ ಯಾವಾಗ ಬಂದನು ಎಂಬುದು ನನಗೆ ತಿಳಿದಿಲ್ಲ. ನಿನ್ನೆ ಅವರ ತಂದೆ ಕರೆ ಮಾಡಿ ಉಜ್ಜಯನಿಯಿಂದ ಯಾವಾಗ ಹಿಂದಿರುಗುತ್ತೀಯಾ ಎಂದು ಕೇಳಿದ್ದರು. ಬೀದಿನಾಯಿಗಳ ಕುರಿತಾದ ಹೋರಾಟಕ್ಕಾಗಿ ದೆಹಲಿಗೆ ಬಂದಿದ್ದೇನೆ ಎಂದು ರಾಜೇಶ್ ತಂದೆಗೆ ತಿಳಿಸಿದ್ದನು ಎಂದಿದ್ದಾರೆ.
ದೆಹಲಿಯಲ್ಲಿ ಬೀದಿನಾಯಿಗಳನ್ನು ಎಳೆದೊಯ್ಯುತ್ತಿರುವ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿ ರಾಜೇಶ್ ಬಹಳ ಕೋಪಗೊಂಡಿದ್ದ, ಊಟ ಮಾಡಿರಲಿಲ್ಲ ಎಂದು ತಾಯಿ ತಿಳಿಸಿದ್ದಾರೆ.ರಾಜೇಶ್ ರಿಕ್ಷಾ ಓಡಿಸುತ್ತಿದ್ದು, ಆತನಿಗೆ ಪತ್ನಿ ಮತ್ತು ಮಗ ಇದ್ದಾರೆ ಎಂದು ಹೇಳಿದ್ದಾರೆ.
ಈ ಮಧ್ಯೆ, ದಾಳಿಕೋರ ರಾಜೇಶ್ ಖಿಮ್‌ಜಿ ಆಗಸ್ಟ್ 19ರಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಶಾಲಿಮಾರ್ ಬಾಗ್ (ವೈಯಕ್ತಿಕ) ನಿವಾಸದ ಬಳಿ ಓಡಾಡುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಪತ್ತೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.