ದೆಹಲಿ ಸಿಎಂ ರೇಖಾ ಗುಪ್ತಾ
ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ‘ಜನ ಸಂವಾದ’ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದು, ಇದು ರೇಖಾ ಅವರ ಹತ್ಯೆಗೆ ನಡೆಸಿದ ‘ಯೋಜಿತ ಸಂಚಿನ ಭಾಗ’ ಎಂದು ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಹೇಳಿದೆ.
ಕೊಲೆ ಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ರಾಜ್‌ಕೋಟ್ ನಿವಾಸಿ ಸಕರಿಯಾ ರಾಜೇಶ್‌ಭಾಯಿ ಖಿಮ್ಜಿಭಾಯಿ (41) ಎಂಬುವವನನ್ನು ಬಂಧಿಸಿ, ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ಗುಪ್ತಚರ ದಳ ಮತ್ತು ದೆಹಲಿ ಪೊಲೀಸ್ ವಿಶೇಷ ಘಟಕವು ವಿಚಾರಣೆ ನಡೆಸುತ್ತಿದೆ. ಬೆಳಿಗ್ಗೆ 8.15ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೇಖಾ ಅವರನ್ನು ವೈದ್ಯರು ಪರೀಕ್ಷಿಸಿದ್ದಾರೆ. ಸದ್ಯ ಅವರು ವೈದ್ಯರ ನಿಗಾದಲ್ಲಿದ್ದಾರೆ ಎಂದು ಸಿಎಂಒ ಅಧಿಕಾರಿಗಳು ತಿಳಿಸಿದ್ದಾರೆ.
ಸಿವಿಲ್ ಲೈನ್ಸ್‌ನಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಬುಧವಾರ ‘ಜನ ಸಂವಾದ’ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಜನರೊಂದಿಗೆ ಕುಳಿತು ತನ್ನ ಸರದಿ ಬಂದಾಗ ಮುಖ್ಯಮಂತ್ರಿ ಅವರ ಬಳಿ ಹೋದ ಆರೋಪಿಯು, ಅವರೊಂದಿಗೆ ಮಾತನಾಡುತ್ತಲೇ ಏಕಾಏಕಿ ಹಲ್ಲೆ ನಡೆಸಿದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ರೇಖಾ ಗುಪ್ತಾ ಅವರ ಕೈ, ಭುಜ ಮತ್ತು ತಲೆಗೆ ಪೆಟ್ಟಾಗಿದೆ ಎಂದು ಲೋಕೋಪಯೋಗಿ ಸಚಿವ ಪರ್ವೇಶ್ ವರ್ಮಾ ತಿಳಿಸಿದ್ದಾರೆ.
ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ’ಝ್‘ ಭದ್ರತೆ ಹೊಂದಿದ್ದಾರೆ. ಘಟನೆ ಕುರಿತ ವಿಸ್ತೃತ ವರದಿಯನ್ನು ಪೊಲೀಸರು ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಅವರ ಭದ್ರತೆ ಕುರಿತು ಗೃಹ ಸಚಿವಾಲಯ ಪರಿಶೀಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಆರೋಪಿಯ ವಿರುದ್ಧ ಎರಡು ಹಲ್ಲೆ ಪ್ರಕರಣ ಸೇರಿದಂತೆ ಐದು ಕ್ರಿಮಿನಲ್ ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಆರೋಪಿ ಬಳಿ ಯಾವುದೇ ಶಸ್ತ್ರಾಸ್ತ್ರ ಇರಲಿಲ್ಲ. ಬಿಗಿ ಭದ್ರತೆ ಇರುವುದರಿಂದ ಶಸ್ತ್ರಾಸ್ತ್ರವನ್ನು ತಂದಿರಲಿಲ್ಲ. ಆತನ ಬ್ಯಾಗ್‌ನಲ್ಲಿ ಬಟ್ಟೆಗಳು ಮತ್ತು ಕೆಲವು ಕಾಗದಪತ್ರಗಳಿದ್ದವು. ಎರಡು ದಿನಗಳ ಹಿಂದೆ ಈತ ದೆಹಲಿಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆ ನಡೆಸಲು ಈತ 24 ಗಂಟೆಗಳ ಮುನ್ನವೇ ಸಂಚು ರೂಪಿಸಿದ್ದ ಎನ್ನುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಗೊತ್ತಾಗಿದೆ. ಮುಖ್ಯಮಂತ್ರಿ ನಿವಾಸದ ಸುತ್ತಮುತ್ತ ಸ್ಥಳವನ್ನು ಸಹ ಈತ ಪರಿಶೀಲಿಸಿದ್ದ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲಿನ ಹಲ್ಲೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಅರವಿಂದ ಕೇಜ್ರಿವಾಲ್ ಮತ್ತು ಆತಿಶಿ ಅವರು ಖಂಡಿಸಿದ್ದಾರೆ.
ಇಂಥ ದಾಳಿಯಿಂದ ಜನರಿಗೆ ಸೇವೆ ಸಲ್ಲಿಸಬೇಕೆಂಬ ನನ್ನ ತುಡಿತವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಹಿಂದೆಂದಿಗಿಂತ ಹೆಚ್ಚಿನ ಶಕ್ತಿ ಮತ್ತು ಸಮರ್ಪಣೆಯೊಂದಿಗೆ ಜನಸೇವೆ ಮುಂದುವರಿಸುತ್ತೇನೆ– ರೇಖಾ ಗುಪ್ತಾ, ಮುಖ್ಯಮಂತ್ರಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ–ವಿರೋಧ ಅಭಿಪ್ರಾಯ ವ್ಯಕ್ತಪಡಿಸುವುದು ಸ್ವೀಕಾರಾರ್ಹ ಆದರೆ ಅಲ್ಲಿ ಹಿಂಸಾಚಾರಕ್ಕೆ ಆಸ್ಪದವಿಲ್ಲ– ಅರವಿಂದ ಕೇಜ್ರಿವಾಲ್, ಮಾಜಿ ಮುಖ್ಯಮಂತ್ರಿ
ಸಿ.ಸಿ.ಟಿ.ವಿ ದೃಶ್ಯ ಹಸ್ತಾಂತರ
ಆರೋಪಿಯು ಎರಡು ದಿನಗಳ ಹಿಂದಷ್ಟೇ ದೆಹಲಿಗೆ ಆಗಮಿಸಿ ಉತ್ತರ ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿ ನೆಲಸಿದ್ದ. ಈ ಹಲ್ಲೆಯು ಪೂರ್ವಯೋಜಿತ ಸಂಚು ಎಂದು ಸಿ.ಸಿ.ಟಿ.ವಿ ದೃಶ್ಯಗಳನ್ನು ಉಲ್ಲೇಖಿಸಿ ಅಧಿಕೃತ ಮೂಲಗಳು ತಿಳಿಸಿವೆ. ಆರೋಪಿಯು ಹಲ್ಲೆಗೂ ಕನಿಷ್ಠ 24 ತಾಸು ಮುನ್ನ ಸಿದ್ಧತೆ ನಡೆಸಿರುವುದು ಸಿ.ಸಿ.ಟಿ.ವಿ ದೃಶ್ಯಾವಳಿಗಳ ಮೂಲಕ ಗೊತ್ತಾಗುತ್ತದೆ. ಆತ ಫೋನ್‌ನಲ್ಲಿ ಮಾತನಾಡುವ ದೃಶ್ಯ ಸೆರೆಯಾಗಿದೆ. ಈ ದೃಶ್ಯಾವಳಿಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.