ADVERTISEMENT

ದೆಹಲಿ ವಿಧಾನಸಭೆ ಸದಸ್ಯರಾಗಿ ಸಿಎಂ ರೇಖಾ ಗುಪ್ತಾ ಸೇರಿ ಸಚಿವರ ಪ್ರಮಾಣ ವಚನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಫೆಬ್ರುವರಿ 2025, 7:36 IST
Last Updated 24 ಫೆಬ್ರುವರಿ 2025, 7:36 IST
<div class="paragraphs"><p>ರೇಖಾ ಗುಪ್ತಾ </p></div>

ರೇಖಾ ಗುಪ್ತಾ

   

ನವದೆಹಲಿ: ದೆಹಲಿ ವಿಧಾನಸಭೆ ಅಧಿವೇಶನ ಇಂದಿನಿಂದ (ಸೋಮವಾರ) ಆರಂಭವಾಗಿದ್ದು, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಸೇರಿದಂತೆ ಸಂಪುಟ ಸಚಿವರು ವಿಧಾನಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬಿಜೆಪಿ ಶಾಸಕ ಅರವಿಂದರ್ ಸಿಂಗ್ ಲವ್ಲಿ ಅವರು ದೆಹಲಿ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಿಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಪ್ರಮಾಣ ವಚನ ಬೋಧಿಸಿದ್ದಾರೆ.

ADVERTISEMENT

ಮಧ್ಯಾಹ್ನ 2 ಗಂಟೆಗೆ ವಿಧಾನಸಭೆ ಸ್ಪೀಕರ್ ಆಯ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ನಾಳೆ (ಮಂಗಳವಾರ) ಲೆಫ್ಟಿನೆಂಟ್ ಗವರ್ನರ್‌ ವಿ.ಕೆ. ಸಕ್ಸೇನಾ ಅವರು ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಮಹಾಲೇಖಪಾಲರ ವರದಿಗಳನ್ನು (ಸಿಎಜಿ) ಮಂಡಿಸಲಾಗುವುದು. ಫೆ. 26ರಂದು ಲೆಫ್ಟಿನೆಂಟ್ ಗವರ್ನರ್‌ ಅವರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

‘ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರ ಜನರ ನಿರೀಕ್ಷೆಗಳನ್ನು ಈಡೇರಿಸಲಿದೆ ಹಾಗೂ ಚುನಾವಣಾ ಪ್ರಚಾರದ ವೇಳೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಿದೆ’ ಎಂದು ಸಚಿವ ಪರ್ವೇಶ್ ವರ್ಮಾ ವಿಸ್ವಾಸ ವ್ಯಕ್ತಪಡಿಸಿದ್ದಾರೆ.

‘ನಮ್ಮ ಸರ್ಕಾರ ನಿಮ್ಮ ನಿರೀಕ್ಷೆಗಳನ್ನು ಈಡೇರಿಸುತ್ತದೆ ಎಂದು ದೆಹಲಿ ಜನತೆಗೆ ಹೇಳಬಯಸುತ್ತೇನೆ. ನಾವು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಇದಕ್ಕೆ ವಿರೋಧ ಪಕ್ಷದ ಸಹಕಾರವೂ ಬೇಕು. ದೆಹಲಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಉತ್ತಮ ಕಾನೂನುಗಳು ರಚನೆಯಾಗಬೇಕಿದೆ. ದೆಹಲಿಯನ್ನು ಪ್ಯಾರಿಸ್ ಅಥವಾ ಲಂಡನ್‌ನಂತೆ ಮಾಡುತ್ತೇವೆ ಎಂದು ನಾನು ಹೇಳಿಕೊಳ್ಳುವುದಿಲ್ಲ. ಆದರೆ, ದೆಹಲಿಯನ್ನು ಅಭಿವೃದ್ಧಿಪಡಿಸುತ್ತೇವೆ. ಇದು ನಮ್ಮ ಸರ್ಕಾರದ ನಿರ್ಣಯವಾಗಿದೆ’ ಎಂದು ವರ್ಮಾ ಹೇಳಿದ್ದಾರೆ.

‘ಇಂದು ಐತಿಹಾಸಿಕ ದಿನ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದಲ್ಲಿ ದೆಹಲಿ ಜನರಿಗಾಗಿ ಕೆಲಸ ಮಾಡುವ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ’ ಎಂದು ಸಚಿವ ಕಪಿಲ್ ಮಿಶ್ರಾ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.