ADVERTISEMENT

ದೆಹಲಿ: ಆಮ್ಲಜನಕ ಸಿಗದೇ ಕೋವಿಡ್–19 ರೋಗಿಗಳ ಪರದಾಟ, 407 ಸಾವು

​ಪ್ರಜಾವಾಣಿ ವಾರ್ತೆ
Published 3 ಮೇ 2021, 2:39 IST
Last Updated 3 ಮೇ 2021, 2:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿಲ್ಲಿ ಲಾಕ್‌ಡೌನ್‌ ಘೋಷಿಸಿದ ಎರಡು ವಾರಗಳ ಬಳಿಕ, ಪರೀಕ್ಷೆಗೆ ಒಳಪಟ್ಟವರ ಪೈಕಿ ಸೋಂಕು ಪತ್ತೆಯಾಗಿರುವ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.

ಆದರೂ, ಉಸಿರಾಟದ ತೀವ್ರ ಸಮಸ್ಯೆ ಎದುರಿಸುತ್ತಿರುವ ರೋಗಿಗಳು ಆಮ್ಲಜನಕ ದೊರೆಯದೆ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರಗೆ ಎಡತಾಕುವುದು ಮುಂದುವರಿದಿದೆ.

ಭಾನುವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಪರೀಕ್ಷೆಗೆ ಒಳಪಟ್ಟಿರುವ 71,997 ಜನರ ಪೈಕಿ 20,394 (ಶೇ 28.33) ಜನರಲ್ಲಿ ಸೋಂಕು ದೃಢಪಟ್ಟಿದೆ.

ಕಳೆದ 15 ದಿನಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಪರೀಕ್ಷೆಗೆ ಒಳಪಟ್ಟವರಲ್ಲಿ ಸೋಂಕಿಗೆ ಒಳಗಾದವರ ಪ್ರಮಾಣ ಶೇ 30ಕ್ಕಿಂತ ಕಡಿಮೆ ಪ್ರಮಾಣಕ್ಕೆ ಇಳಿದಿದೆ. ಶನಿವಾರ ಶೇ 31.61ರಷ್ಟು ಜನರಲ್ಲಿ ಸೋಂಕು ಪತ್ತೆಯಾಗಿತ್ತು.

24,444 ಜನ ಗುಣಮುಖರಾಗಿದ್ದಾರೆ. ಈ ಸಂಖ್ಯೆಯು ಸೋಂಕಿತರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿರುವುದು ಸ್ವಲ್ಪ ಮಟ್ಟಿನ ಸಮಾಧಾನಕ್ಕೆ ಕಾರಣವಾಗಿದೆ. ಶನಿವಾರದಿಂದ ಹೊಸದಾಗಿ ಸೊಂಕಿಗೆ ಒಳಗಾಗುತ್ತಿರುವವರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿರುವುದೂ ಆತಂಕ ತಗ್ಗಲು ಕಾರಣವಾಗಿದೆ.

ಆದರೆ, ಇದೇ ಅವಧಿಯಲ್ಲಿ ಸಾವಿನ ಪ್ರಮಾಣದಲ್ಲಿ ಸಾಕಷ್ಟು ಪ್ರಮಾಣದ ಸುಧಾರಣೆ ಸಾಧ್ಯವಾಗದೆ, ಒಟ್ಟು 407 ಜನ ಮೃತಪಟ್ಟಿದ್ದಾರೆ. ನಗರದಲ್ಲಿ ಇದುವರೆಗೆ ಕೊರೊನಾಗೆ ಜೀವ ಕಳೆದುಕೊಂಡವರ ಸಂಖ್ಯೆ 16,966ಕ್ಕೆ ತಲುಪಿದೆ.

ಶನಿವಾರ ಒಂದು ಲಕ್ಷಕ್ಕೆ ಸಮೀಪಿಸಿದ್ದ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆಯು 92,290ಕ್ಕೆ ಇಳಿದಿದ್ದರೂ, ಆಸ್ಪತ್ರೆಗಳಲ್ಲಿ ಹಾಸಿಗೆಯ ಕೊರತೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.