
ಬಿಜೆಪಿ
ನವದೆಹಲಿ: ಚುನಾವಣಾ ಫಲಿತಾಂಶ ಹೊರಬಂದು ಸುಮಾರು ದಿನಗಳೇ ಕಳೆದರೂ ಬಿಜೆಪಿಗೆ ಸಿಎಂ ಆಯ್ಕೆ ಮಾಡಲು ಆಗದಿರುವುದನ್ನು ಟೀಕಿಸಿರುವ ಎಎಪಿ ನಾಯಕ ಗೋಪಾಲ್ ರಾಯ್, ಹಿಂದಿನಂತೆ ದೆಹಲಿ ಮುಂದಿನ ಐದು ವರ್ಷಗಳಲ್ಲಿ ಮತ್ತೆ ಮೂವರು ಸಿಎಂಗಳನ್ನು ಕಾಣಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಪ್ರತಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರೈ, ನಿರ್ಣಾಯಕ ಗೆಲುವಿನ ಹೊರತಾಗಿಯೂ ಸಿಎಂ ಆಯ್ಕೆ ವಿಚಾರದಲ್ಲಿ ಬಿಜೆಪಿ ಹೆಣಗಾಡುತ್ತಿದೆ. ಇದು ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳಿಗೆ ಸಾಕ್ಷಿಯಾಗಿದೆ. ಪ್ರಚಾರದ ಸಮಯದಲ್ಲಿ ಚುನಾವಣಾ ಆಯೋಗದ ಜತೆಗೂಡಿ ಬಿಜೆಪಿ ತಂತ್ರಗಳನ್ನು ಬಳಸಿತ್ತು. ಅದರ ಹೊರತಾಗಿಯೂ ದೆಹಲಿಯ ಜನರು ನಮ್ಮೊಂದಿಗೆ ನಿಂತರು ಮತ್ತು ಅದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ಜನರೊಂದಿಗೆ ಎಎಪಿ ಧ್ವನಿ ಸದಾ ನಿಲ್ಲಲಿದೆ ಎಂದು ರಾಯ್ ತಿಳಿಸಿದ್ದಾರೆ.
'10 ದಿನಗಳ ಕಳೆದರೂ ಬಿಜೆಪಿಗೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಬಿಜೆಪಿಯು ಆಂತರಿಕವಾಗಿ ಅಧಿಕಾರಕ್ಕಾಗಿ ಹೋರಾಟಗಳು ನಡೆಸುತ್ತಿದೆ. ಯಾರು ಮುಖ್ಯಮಂತ್ರಿಯಾದರೂ ಪಕ್ಷದೊಳಗಿನ ಇತರ ಬಣಗಳಿಂದ ಪ್ರತಿರೋಧ ಎದುರಾಗುವುದು ನಿಶ್ಚಿತ' ಎಂದು ರಾಯ್ ಹೇಳಿದ್ದಾರೆ.
ಬಿಜೆಪಿ ಸಿಎಂ ಆಯ್ಕೆ ಮಾಡಿದ ಬಳಿಕ ಎಎಪಿ ವಿರೋಧ ಪಕ್ಷದ ನಾಯಕನನ್ನು ನಿರ್ಣಯಿಸುತ್ತದೆ ಎಂದೂ ರಾಯ್ ತಿಳಿಸಿದ್ದಾರೆ.
ಇತ್ತೀಚೆಗೆ 70 ಸದಸ್ಯ ಬಲ ಹೊಂದಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದರೆ, ಎಎಪಿ 22 ಸ್ಥಾನಗಳನ್ನು ಗಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.