ADVERTISEMENT

ಚಿದಂಬರಂ ವಿರುದ್ಧ ಹಣದ ಅಕ್ರಮ ವರ್ಗಾವಣೆ ಆರೋಪ : ಇ.ಡಿ ವಿಚಾರಣೆಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 20:00 IST
Last Updated 15 ಅಕ್ಟೋಬರ್ 2019, 20:00 IST
ಪಿ. ಚಿದಂಬರಂ
ಪಿ. ಚಿದಂಬರಂ   

ನವದೆಹಲಿ: ಹಣದ ಅಕ್ರಮ ವರ್ಗಾವಣೆಯ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಲು ಮತ್ತು ಅಗತ್ಯವೆನಿಸಿದರೆ ಬಂಧಿಸಲು ದೆಹಲಿಯ ನ್ಯಾಯಾಲಯವು(ಇ.ಡಿ) ಜಾರಿ ನಿರ್ದೇಶನಾಲಯಕ್ಕೆ ಮಂಗಳ ವಾರ ಅನುಮತಿ ನೀಡಿದೆ.

ಐಎನ್‌ಎಕ್ಸ್ ಮೀಡಿಯಾ ಹಗರಣದ ಆರೋಪಿಯಾಗಿರುವ ಚಿದಂಬರಂ ಅವರು ಈಗಾಗಲೇ ಸಿಬಿಐ ಬಂಧನದಲ್ಲಿದ್ದು ಅಕ್ಟೋಬರ್‌ 17ರವರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಸಕ್ತ ಅವರು ತಿಹಾರ್‌ ಜೈಲಿನಲ್ಲಿದ್ದಾರೆ.

‘ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬ ರಂ ಅವರ ವಿಚಾರಣೆ ನಡೆಸಬೇಕಾಗಿದ್ದು ಅವರನ್ನು ತಮ್ಮ ವಶಕ್ಕೆ ಒಪ್ಪಿಸಬೇಕು’ ಎಂದು ಇ.ಡಿ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಇದನ್ನು ವಿಚಾರಣೆಗೆ ಎತ್ತಿಕೊಂಡ ವಿಶೇಷ ನಾಯಾಧೀಶ ಅಜಯ್‌ ಕುಮಾರ್‌ ಅವರು, ‘ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸ ಬೇಕೇ ಬೇಡವೇ ಎಂಬುದನ್ನು ಈಗಲೇ ತೀರ್ಮಾನಿಸಲಾಗದು. ತಿಹಾರ್‌ ಜೈಲಿನಲ್ಲಿಯೇ ಬುಧವಾರ ಅಧಿಕಾರಿಗಳು ಅವರ ವಿಚಾರಣೆ ನಡೆಸಬಹುದು. ಅಗತ್ಯವೆನಿಸಿದರೆ ಅವರನ್ನು ಬಂಧಿಸಬಹುದು’ ಎಂದರು.

ADVERTISEMENT

ಪ್ರಫುಲ್‌ ಪಟೇಲ್‌ಗೆ ಮತ್ತೆ ಸಮನ್ಸ್‌
ನವದೆಹಲಿ: ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಸಮನ್ಸ್ ಜಾರಿಗೊಳಿಸಿದ್ದು, ಅಕ್ಟೋಬರ್ 18ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಾಯಕ ಇಕ್ಬಾಲ್ ಮಿರ್ಚಿ ಹಾಗೂ ಪ್ರಫುಲ್ ಕುಟುಂಬದ ನಡುವೆ ವ್ಯವಹಾರ ನಡೆದಿದೆ ಎಂಬ ಆರೋಪವಿದೆ. ಆದರೆ ಇದನ್ನು ತಳ್ಳಿಹಾಕಿರುವ ಪ್ರಫುಲ್ ಪಟೇಲ್, ‘ನನ್ನ ಮತ್ತು ಮಿರ್ಚಿ ನಡುವೆ ಒಂದೇ ಒಂದು ಪೈಸೆಯ ವ್ಯವಹಾರವೂ ನಡೆದಿಲ್ಲ’ ಎಂದಿದ್ದಾರೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಿರುವಾಗ ಇ.ಡಿ. ಸಮನ್ಸ್ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ಇದು ‘ದೇಶದ್ರೋಹಕ್ಕೆ ಕಡಿಮೆಯಲ್ಲದ ಕೃತ್ಯ’ ಎಂದಿದ್ದಾರೆ.

ಹಿನ್ನೆಲೆ: ಪಟೇಲ್‌ ಕುಟುಂಬಕ್ಕೆ ಸೇರಿದ ಮಿಲೇನಿಯಂ ಡೆವಲಪರ್ಸ್ ಪ್ರೈ. ಲಿ. ಸಂಸ್ಥೆಯು 2006–07ರಲ್ಲಿ ಮುಂಬೈನಲ್ಲಿ ನಿರ್ಮಿಸಿದ್ದ ಸಿಜೆ ಹೌಸ್ ಕಟ್ಟಡದ ಮೂರನೇ ಹಾಗೂ ನಾಲ್ಕನೇ ಮಹಡಿಗಳನ್ನು ಮಿರ್ಚಿಯ ಪತ್ನಿ ಹೆಸರಿಗೆ ವರ್ಗಾಯಿಸಲಾಗಿತ್ತು. ಈ ಕಟ್ಟಡದ ಭೂಮಿಯನ್ನು ಶಂಕಾಸ್ಪದ ರೀತಿಯಲ್ಲಿ ಮಿರ್ಚಿಯು ಮಿಲೇನಿಯಂ ಡೆವಲಪರ್ಸ್‌ ಸಂಸ್ಥೆಗೆ ನೀಡಿದ್ದ. ಇದಕ್ಕೆ ಪ್ರತಿಯಾಗಿ ಎರಡು ಮಹಡಿಗಳನ್ನು ನೀಡಲಾಗಿತ್ತು ಎಂದು ಇ.ಡಿ. ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.