ADVERTISEMENT

NSE ಹಗರಣ: ಮಾಜಿ ಸಿಇಒ ಚಿತ್ರಾ ರಾಮಕೃಷ್ಣಗೆ ಜಾಮೀನು ನಿರಾಕರಣೆ

ಪಿಟಿಐ
Published 29 ಆಗಸ್ಟ್ 2022, 11:40 IST
Last Updated 29 ಆಗಸ್ಟ್ 2022, 11:40 IST
ಚಿತ್ರಾ ರಾಮಕೃಷ್ಣ
ಚಿತ್ರಾ ರಾಮಕೃಷ್ಣ   

ನವದೆಹಲಿ: ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್‌ಇ)ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧನದಲ್ಲಿರುವ ಎನ್‌ಎಸ್‌ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅವರಿಗೆ ಜಾಮೀನು ನೀಡಲು ದೆಹಲಿ ಸಿಬಿಐ ವಿಶೇಷ ನ್ಯಾಯಾಲಯ ನಿರಾಕರಿಸಿದೆ.

ಚಿತ್ರಾ ಅವರ ಜಾಮೀನು ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ. ಸುನೇನಾ ಶರ್ಮಾ ಅವರು, ‘ಚಿತ್ರಾ ಅವರ ಪ್ರಕರಣ ಎನ್‌ಎಸ್‌ಇ ಇತಿಹಾಸದಲ್ಲಿ ಕಪ್ಪು ಚುಕ್ಕೆ’ ಎಂದು ಹೇಳಿದ್ದಾರೆ.

ಹಿಮಾಲಯದ ನಿಗೂಢ ಯೋಗಿಯೊಬ್ಬರ ಆದೇಶ ಪಾಲಿಸುತ್ತಿದ್ದ ಚಿತ್ರಾ ಮತ್ತು ಎನ್‌ಎಸ್‌ಇಯ ಇತರ ಅಧಿಕಾರಿಗಳು ಸೂಕ್ಷ್ಮ ಮಾಹಿತಿಗಳನ್ನು ಕಂಪನಿಯೊಂದಕ್ಕೆ ನೀಡಿದ ಆರೋಪ ಹಾಗೂ 2009–17 ರ ಅವಧಿಯಲ್ಲಿ ಎನ್‌ಎಸ್‌ಇ ಉದ್ಯೋಗಿಗಳ ಫೋನ್ ಟ್ಯಾಪಿಂಗ್ ಆರೋಪ ಎದುರಿಸುತ್ತಿದ್ದಾರೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೈಗೆತ್ತಿಕೊಂಡಿದ್ದ ಸಿಬಿಐ, ಚಿತ್ರಾ ಅವರನ್ನು ಕಳೆದ ಮಾರ್ಚ್ 6 ರಂದು ಬಂಧಿಸಿತ್ತು.

ಹಿಮಾಲಯದ ನಿಗೂಢ ಯೋಗಿಯೊಬ್ಬರ ಸಲಹೆ ಮೇರೆಗೆ ಚಿತ್ರಾ ಕಾರ್ಯ ನಿರ್ವಹಿಸುತ್ತಿದ್ದರು ಎಂಬ ಮಾಹಿತಿ ಸಿಕ್ಕ ಬಳಿಕ, ಫೆಬ್ರುವರಿ 25ರಂದು ಎನ್‌ಎಸ್‌ಇಯ ಮಾಜಿ ಸಿಒಒ ಆನಂದ್ ಸುಬ್ರಮಣಿಯನ್ ಅವರನ್ನು ಸಿಬಿಐ ಬಂಧಿಸಿತ್ತು.

ಏನಿದು ಪ್ರಕರಣ?

ದೆಹಲಿ ಮೂಲದ ಒಪಿಜಿ ಸೆಕ್ಯುರಿಟೀಸ್‌ ಪ್ರೈ.ಲಿ. ಕಂಪನಿಯ ಮಾಲೀಕ ಸಂಜಯ್ ಗುಪ್ತಾ ಎನ್‌ಎಸ್‌ಇಯ ಕೆಲವು ಅಧಿಕಾರಿಗಳ ಜೊತೆ ಶಾಮೀಲಾಗಿ ಎನ್‌ಎಸ್‌ಇ ಸರ್ವರ್‌ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂಬ ಆರೋಪ ಇದೆ.

2010ರಿಂದ 2012ರ ನಡುವೆ ಈ ಖಾಸಗಿ ಕಂಪನಿಗೆ ಷೇರುಪೇಟೆಯ ಸರ್ವರ್‌ಗೆ ಮೊದಲಿಗನಾಗಿ ಲಾಗಿನ್ ಆಗಲು ಎನ್‌ಎಸ್‌ಇಯ ಕೆಲವು ಅಧಿಕಾರಿಗಳು ಅಕ್ರಮವಾಗಿ ಅನುಕೂಲ ಮಾಡಿಕೊಡುತ್ತಿದ್ದರು. ಇದರಿಂದಾಗಿ ಈ ಕಂಪನಿಗೆ ಬೇರೆ ಯಾವುದೇ ಬ್ರೋಕರ್‌ಗಿಂತ ಮೊದಲು ಕೆಲವು ದತ್ತಾಂಶಗಳು ಸಿಗುತ್ತಿದ್ದವು ಎಂದು ಸಿಬಿಐ ಪ್ರಥಮ ಮಾಹಿತಿ ವರದಿ (ಎಫ್ಐಆರ್‌)ಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.