ನವದೆಹಲಿ: ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಶೋರಾ ವಿರುದ್ಧ 2019ರಲ್ಲಿ ದಾಖಲಾದ ದೇಶದ್ರೋಹ ಪ್ರಕರಣವನ್ನು ಹಿಂಪಡೆಯಲು ಇಲ್ಲಿನ ನ್ಯಾಯಾಲಯ ದೆಹಲಿ ಪೊಲೀಸರಿಗೆ ಅನುಮತಿ ನೀಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶೆಹ್ಲಾ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲ ವಿ. ಕೆ. ಸಕ್ಸೇನಾ ನೀಡಿದ್ದ ಅನುಮತಿಯನ್ನು ಹಿಂಪಡೆದುಕೊಂಡಿದ್ದಾರೆ ಎಂದು ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ಸಿಂಗ್, ಫೆಬ್ರುವರಿ 27 ರಂದು ಪ್ರಕರಣ ಹಿಂಪಡೆಯಲು ಅನುಮತಿಸಿದ್ದಾರೆ.
ದೇಶದ್ರೋಹ, ಧರ್ಮ, ಭಾಷೆ, ಜನಾಂಗ, ಜನ್ಮಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ, ಗಲಭೆ ಪ್ರಚೋದಿಸುವ ಆರೋಪದಡಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇವು ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಆರೋಪಗಳು.
ಅಲಖ್ ಅಲೋಕ್ ಶ್ರೀವಾಸ್ತವ ಎಂಬವರ ದೂರಿನ ಆಧಾರದಲ್ಲಿ ಶೆಹ್ಲಾ ವಿರುದ್ಧ 2019ರಲ್ಲಿ ನವದೆಹಲಿಯ ವಿಶೇಷ ಸೆಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಸೇನೆಯು ಕಾಶ್ಮೀರದಲ್ಲಿ ಮನೆಗಳಿಗೆ ಪ್ರವೇಶಿಸಿ ಸ್ಥಳೀಯರನ್ನು ಹಿಂಸಿಸುತ್ತದೆ ಎಂದು ಶೆಹ್ಲಾ ರಶೀದ್ 2019 ಆಗಸ್ಟ್ 18 ರಂದು ಟ್ವೀಟ್ ಮಾಡಿ ಆರೋಪಿಸಿದ್ದರು.
ಆರೋಪಗಳನ್ನು ಆಧಾರರಹಿತವೆಂದು ಸೇನೆ ತಳ್ಳಿ ಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.