ADVERTISEMENT

ಎಎಪಿ ಶಾಸಕನ ಹೆಸರು ಬರೆದಿಟ್ಟು ದೆಹಲಿಯಲ್ಲಿ ವೈದ್ಯ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 4:32 IST
Last Updated 19 ಏಪ್ರಿಲ್ 2020, 4:32 IST
ಮಹಿಳೆಯನ್ನು ಬೆದರಿಸಿದ ಆರೋಪದ ಮೇಲೆ 2018ರಲ್ಲಿ ಶಾಸಕ ಜಾರ್ವಾಲ್‌ ಅವರನ್ನು ಪೊಲೀಸರು ಬಂಧಿಸಿದ್ದರು.
ಮಹಿಳೆಯನ್ನು ಬೆದರಿಸಿದ ಆರೋಪದ ಮೇಲೆ 2018ರಲ್ಲಿ ಶಾಸಕ ಜಾರ್ವಾಲ್‌ ಅವರನ್ನು ಪೊಲೀಸರು ಬಂಧಿಸಿದ್ದರು.    

ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕರೊಬ್ಬರ ಕಿರುಕುಳದಿಂದ ಬೇಸತ್ತು ವೈದ್ಯರೊಬ್ಬರು (52) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಎರಡು ಪುಟಗಳ ಟಿಪ್ಪಣಿ ಬರೆದಿರುವ ಮೃತ ವೈದ್ಯ, ‘ಆಡಳಿತ ಪಕ್ಷದ ಶಾಸಕ ಮತ್ತು ಸಹಚರರು ಹಣ ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹಣ ನೀಡಲು ನಿರಾಕರಿಸಿದಾಗ ನನ್ನ ವ್ಯವಹಾರಗಳಿಗೆ ತೊಂದರೆ ನೀಡುತ್ತಿದ್ದಾರೆ,’ ಎಂದು ಆರೋಪಿಸಿದ್ದಾರೆ.

ದೆಹಲಿ ನೆಬ್ ಸರಾಯ್ ಪ್ರದೇಶದಲ್ಲಿ ವಾಸವಾಗಿದ್ದ ರಾಜೇಂದ್ರ ಸಿಂಗ್ ಮೃತ ವೈದ್ಯ. ಅವರು ನೀರಿನ ಟ್ಯಾಂಕರ್ ವ್ಯವಹಾರವನ್ನೂ ನಡೆಸುತ್ತಿದ್ದರು. ಭಾನುವಾರ ಬೆಳಗ್ಗೆ ಅವರು ತಮ್ಮ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇದನ್ನು ಕಂಡ ಮನೆ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ತಮ್ಮ ಸಾವಿಗೆ ದೇವ್ಲಿ ಶಾಸಕ ಪ್ರಕಾಶ್ ಜಾರ್ವಾಲ್ ಮತ್ತು ಅವರ ಸಹಚರ ಕಪಿಲ್ ನಗರ್‌ ಕಾರಣ ಎಂದು ವೈದ್ಯ ರಾಜೇಂದ್ರ ಸಿಂಗ್‌ ಬರೆದಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮೃತ ವೈದ್ಯ ರಾಜೇಂದ್ರ ಸಿಂಗ್‌ ಅವರ ಡೈರಿಯನ್ನು ವಶಕ್ಕೆ ಪಡೆದಿದ್ದಾರೆ. ಶಾಸಕ ಪ್ರಕಾಶ್‌ ಜಾರ್ವಾಲ್‌ ಅವರ ಕಿರುಕುಳವನ್ನು ವೈದ್ಯ ಅದರಲ್ಲಿ ವಿವರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ದೆಹಲಿ ಜಲಮಂಡಳಿಗೆ ಟ್ಯಾಂಕರ್‌ಗಳನ್ನು ತಾವು ಬಾಡಿಗೆ ನೀಡಿರುವುದಾಗಿಯೂ, ಅದಕ್ಕೆ ಪ್ರತಿಯಾಗಿ ಶಾಸಕ ಜಾರ್ವಾಲ್‌ ಅವರು ಹಣ ಕೇಳುತ್ತಿರುವುದಾಗಿಯೂ, ಹಣ ನೀಡದೇ ಇದ್ದಾಗ ಟ್ಯಾಂಕರ್‌ಗಳನ್ನು ಜಲ ಮಂಡಳಿಯಿಂದ ತೆಗೆದುಹಾಕಿರುವುದಾಗಿಯೂ, ಅಲ್ಲದೆ ತನಗೆ ಕೊಲೆ ಬೆದರಿಕೆ ಇದ್ದದ್ದಾಗಿಯೂ ವೈದ್ಯ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ.

ಶಾಸಕ ಜಾರ್ವಾಲ್‌ ಮತ್ತು ಸಹಚರರ ವಿರುದ್ಧ ಸುಲಿಗೆ, ಕೊಲೆ ಯತ್ನ ಮತ್ತು ಬೆದರಿಕೆ ಪ್ರಕರಣ ದಾಖಲಿಸಲಾಗಿದೆ. ಜಾರ್ವಾಲ್‌ ಈ ಹಿಂದೆ ಮಹಿಳೆಯನ್ನು ಬೆದರಿಸಿದ ಆರೋಪ ಎದುರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.