ADVERTISEMENT

ದೆಹಲಿ: ಚುನಾವಣಾ ವಿಷಯವಲ್ಲ ವಾಯುಮಾಲಿನ್ಯ!

ಪೌರತ್ವ ತಿದ್ದುಪಡಿ ಕಾಯ್ದೆ ಜಪದಲ್ಲಿ ತೊಡಗಿರುವ ಬಿಜೆಪಿ

ಸಿದ್ದಯ್ಯ ಹಿರೇಮಠ
Published 3 ಫೆಬ್ರುವರಿ 2020, 18:30 IST
Last Updated 3 ಫೆಬ್ರುವರಿ 2020, 18:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವ ಜಿದ್ದಿಗೆ ಬಿದ್ದು ಪ್ರಚಾರದಲ್ಲಿ ತೊಡಗಿರುವ ರಾಜಕೀಯ ಪಕ್ಷಗಳಿಗೆ ರಾಜಧಾನಿ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳು ಲೆಕ್ಕಕ್ಕೇ ಇಲ್ಲದಂತಾಗಿವೆ.

ದೆಹಲಿಯ ಮತದಾರರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಅತ್ಯಂತ ಪ್ರಮುಖವಾಗಿರುವುದು ಪ್ರತಿ ವರ್ಷದ ಚಳಿಗಾಲದ ಆರಂಭಕ್ಕೆ ಜನರ ಜೀವ ಹಿಂಡುವ ವಾಯು ಮಾಲಿನ್ಯ. ಆದರೂ ಅದನ್ನು ಈ ಚುನಾವಣೆಯ ಪ್ರಮುಖ ಚರ್ಚಿತ ವಿಷಯವನ್ನಾಗಿ ಯಾವ ಪಕ್ಷಗಳೂ ಪರಿಗಣಿಸಿಲ್ಲ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಆಪ್‌), ಹಿಂದೆ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷ ಈ ಸಮಸ್ಯೆಯನ್ನು ಮರೆತಿವೆ.

ADVERTISEMENT

ಚುನಾವಣೆಗೆ ಕೇವಲ ಐದು ದಿನಗಳು ಉಳಿದಿರುವಂತೆ ಪ್ರಚಾರ ಕಾವು ಪಡೆದುಕೊಂಡಿದೆ. ಅಖಾಡದಲ್ಲಿರುವ ಎರಡು ರಾಷ್ಟ್ರೀಯ ಪಕ್ಷಗಳ ಬಹಿರಂಗ ಪ್ರಚಾರ ಸಭೆಗಳು, ಮುಖಂಡರ ಹೇಳಿಕೆಗಳು, ಘೋಷಣೆಗಳು ಬರೀ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ಸುತ್ತಲೇ ಗಿರಕಿ ಹೊಡೆಯುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಸೋಮವಾರ ಇಲ್ಲಿನ ಕರಕರಡೂಮಾ ಪ್ರದೇಶದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರದ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಹ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಸಿಎಎ ವಿಷಯವನ್ನೇ ಪ್ರಧಾನವಾಗಿ ಪ್ರಸ್ತಾಪಿಸಿದ್ದಾರೆ.

ಶಾಲೆಗಳಿಗೆ ಬಿಜೆಪಿ ಭೇಟಿ:ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಕಳೆದ ಮೂರು ದಿನಗಳಿಂದ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಯ ವಿಡಿಯೊ ಬಿಡುಗಡೆಮಾಡಿರುವ ಬಿಜೆಪಿ ಸಂಸದರು, ‘ಐದು ವರ್ಷಗಳಲ್ಲಿ ದೆಹಲಿಯ ಶಾಲೆಗಳ ಹಾಗೂ ಶಿಕ್ಷಣದ ಗುಣಮಟ್ಟ ಸುಧಾರಿಸಿದೆ ಎಂಬ ಆಪ್‌ ಹೇಳಿಕೆ ಶುದ್ಧ ಸುಳ್ಳು’ ಎಂದು ಸಾರುತ್ತಿದ್ದಾರೆ.

‘ಆಪ್‌ ಅಧಿಕಾರದ ಅವಧಿಯಲ್ಲಿ ಶಾಲೆಗಳೇನೂ ಸುಧಾರಿಸಿಲ್ಲ’ ಎಂಬ ವರದಿಯನ್ನು ಬಿಜೆಪಿ ಸಂಸದರು ಅಮಿತ್‌ ಶಾ ಅವರಿಗೂ ಸಲ್ಲಿಸಿದ್ದಾರೆ. ಶಾಲೆಗಳು ಸುಧಾರಿಸಿರುವ ಅಂಶವನ್ನು ಬದಿಗಿರಿಸಿ, ಕೆಲವು ಲೋಪಗಳನ್ನೇ ತೋರಿಸಿರುವ ಸಂಸದರು ಸತ್ಯಾಂಶ ಮುಚ್ಚಿಟ್ಟು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ದೂರಿರುವ ಮುಖ್ಯಮಂತ್ರಿ ಕೇಜ್ರಿವಾಲ್, ‘ಅದನ್ನು ನಂಬಬೇಡಿ’ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಕೇಜ್ರಿವಾಲ್‌ ಅಭಿಮಾನಿಗೆ ದಂಡ

ಸಾಧನೆ ಬಿಂಬಿಸುವ ಅಭಿಯಾನಕ್ಕೆ ಆರು ತಿಂಗಳ ಹಿಂದೆಯೇ ಆಮ್‌ ಆದ್ಮಿ ಪಕ್ಷ ಚಾಲನೆ ನೀಡಿದೆ.
‘ಐ ಲವ್‌ ಕೇಜ್ರಿವಾಲ್‌’, ‘ಸಿರ್ಫ್‌ ಕೇಜ್ರಿವಾಲ್‌’ ಎಂಬ ಘೋಷಣೆಗಳು ಆ ಅಭಿಯಾನದ ಭಾಗ. ಕೆಲವು ಆಟೊ ರಿಕ್ಷಾ ಚಾಲಕರು ಅಭಿಮಾನದಿಂದ ತಮ್ಮ ವಾಹನಗಳ ಹಿಂದೆ ‘ಐ ಲವ್‌ ಕೇಜ್ರಿವಾಲ್‌’ ಎಂಬ ಸ್ಟಿಕ್ಕರ್‌ ಅಂಟಿಸಿದ್ದಾರೆ.

‘ಆ ರೀತಿಯ ಸ್ಟಿಕ್ಕರ್‌ ಅಂಟಿಸಿರುವುದೇ ಸಂಚಾರ ನಿಯಮ ಉಲ್ಲಂಘನೆ’ ಎಂದು ಆರೋಪಿಸಿ ದೆಹಲಿ ಪೊಲೀಸರು ಆಟೊ ಚಾಲಕರೊಬ್ಬರಿಗೆ ಕಳೆದ ವಾರ ₹ 10,000 ದಂಡ ವಿಧಿಸಿರುವ ಪ್ರಕರಣ ಈಗ ಹೈಕೋರ್ಟ್‌ ಮೆಟ್ಟಿಲೇರಿದೆ.

‘ಸ್ಟಿಕ್ಕರ್‌ ಅಂಟಿಸುವುದು ನನಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ. ದಂಡ ವಿಧಿಸುವ ಮೂಲಕ ಅದಕ್ಕೆ ಧಕ್ಕೆ ತರಲಾಗಿದೆ’ ಎಂದು ದೂರಿ ಚಾಲಕ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ನವೀನ್‌ ಚಾವ್ಲಾ ನೇತೃತ್ವದ ಪೀಠ, ಈ ಸಂಬಂಧ ಮುಂದಿನ ಮಾರ್ಚ್‌ 3ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ದೆಹಲಿ ಸರ್ಕಾರ, ದೆಹಲಿ ಪೊಲೀಸ್‌ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.