ADVERTISEMENT

ದೆಹಲಿ ಅಬಕಾರಿ ನೀತಿ ಪ್ರಕರಣ: ಇ.ಡಿಯಿಂದ ಉದ್ಯಮಿ ಬಂಧನ

ಪಿಟಿಐ
Published 2 ಮಾರ್ಚ್ 2023, 10:53 IST
Last Updated 2 ಮಾರ್ಚ್ 2023, 10:53 IST
   

ನವದೆಹಲಿ: ದೆಹಲಿಯ ಅಬಕಾರಿ ನೀತಿ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ), ಹಣ ಅಕ್ರಮ ವರ್ಗಾವಣೆ ಆರೋಪದಡಿ ಅಬಕಾರಿ ಉದ್ಯಮಿ, ಬ್ರಿಂಡ್‌ಕೊ ಸೇಲ್ಸ್‌ ಲಿಮಿಟೆಡ್‌ನ ನಿರ್ದೇಶಕ ಅಮನ್‌ದೀಪ್‌ ಧಲ್‌ ಅವರನ್ನು ಬಂಧಿಸಿದೆ.

ವಿಚಾರಣೆಗಾಗಿ ಬುಧವಾರ ಧಲ್‌ ಅವರನ್ನು ವಶಕ್ಕೆ ಪಡೆದಿದ್ದ ಅಧಿಕಾರಿಗಳು ಗುರುವಾರ ಬಂಧಿಸಿದರು. ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ದಾಖಲಿಸಿರುವ ಎಫ್‌ಐಆರ್‌ನ ಅನುಸಾರ, ಆಪ್‌ನ ಕಾರ್ಯಕರ್ತ ವಿಜಯ್ ನಾಯರ್‌, ಮನೋಜ್‌ ರಾಯ್, ಅಮನ್‌ದೀಪ್‌ ಧಲ್ ಮತ್ತು ಸಮೀರ್ ಮಹಂದ್ರು ಅವರು ಅಬಕಾರಿ ನೀತಿಯ ರಚನೆ ಮತ್ತು ಅದರ ಅನುಷ್ಠಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಿಬಿಐ ಎಫ್‌ಐಆರ್‌ ಆಧರಿಸಿ ಇ.ಡಿ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ.

ADVERTISEMENT

ಈ ಸಂಬಂಧ ಇ.ಡಿ ಇದುವರೆಗೂ ಎರಡು ದೋಷಾರೋಪ ಪಟ್ಟಿ ದಾಖಲಿಸಿದ್ದು, ಧಲ್‌ ಸೇರಿದಂತೆ 10 ಜನರನ್ನು ಬಂಧಿಸಿದೆ. ಅಬಕಾರಿ ನೀತಿಗೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರನ್ನು ಭಾನುವಾರವಷ್ಟೇ ಸಿಬಿಐ ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.