ADVERTISEMENT

ದೆಹಲಿ ಅಬಕಾರಿ ಹಗರಣ: ಇ.ಡಿಯಿಂದ ಇಬ್ಬರು ಉದ್ಯಮಿಗಳ ಬಂಧನ

ಪಿಟಿಐ
Published 14 ನವೆಂಬರ್ 2022, 6:49 IST
Last Updated 14 ನವೆಂಬರ್ 2022, 6:49 IST
   

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಇಬ್ಬರು ಉದ್ಯಮಿಗಳನ್ನು ಬಂಧಿಸಿದ್ದಾರೆ.

ವಿಜಯ್ ನಾಯರ್ ಮತ್ತು ಅಭಿಷೇಕ್ ಬೋನಪಲ್ಲಿ ಬಂಧಿತ ಆರೋಪಿಗಳು. ಅಬಕಾರಿ ಹಗರಣದ ಹಣ ಅಕ್ರಮ ವರ್ಗಾವಣೆ ಸಂಬಂಧಿಸಿದಂತೆ ಇ.ಡಿ ತನಿಖೆ ನಡೆಸುತ್ತಿದೆ.

ಅಕ್ರಮದ ಆರೋಪ ಬಂದ ಹಿನ್ನೆಲೆಯಲ್ಲಿ ಅಬಕಾರಿ ನೀತಿಯನ್ನು ದೆಹಲಿ ಸರ್ಕಾರ ಹಿಂಪಡೆದಿತ್ತು.

ADVERTISEMENT

ಈಗಾಗಲೇ ಸಿಬಿಐ ವಶದಲ್ಲಿರುವ ಈ ಇಬ್ಬರನ್ನು ವಶಕ್ಕೆ ನೀಡುವಂತೆ ಇ.ಡಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.

ಹೈದರಾಬಾದ್ ಮೂಲದ ಬೋನಪಲ್ಲಿ ದಕ್ಷಿಣ ಭಾರತದ ಕೆಲ ಮದ್ಯ ವ್ಯಾಪಾರಿಗಳ ಪರ ಲಾಬಿ ನಡೆಸಿದ್ದರು ಎಂಬ ಆರೋಪವಿದೆ.

ನಾಯರ್ ಅವರು, ಈ ಹಿಂದೆ ಎಎಪಿ ಜೊತೆ ನಂಟು ಹೊಂದಿದ್ದ ಕಾರ್ಯಕ್ರಮ ನಿರ್ವಹಣಾ ಕಂಪನಿಯೊಂದರ ಸಿಇಒ ಆಗಿದ್ದು, ಅಬಕಾರಿ ನೀತಿಗೆ ಸಂಬಂಧಿಸಿದಂತೆ ಸಂಚು ನಡೆಸಿದ್ದರು ಎಂಬುದು ಸಿಬಿಐ ಆರೋಪವಾಗಿದೆ.

ಇದಕ್ಕೂ ಮುನ್ನ, ಇಡಿ ಈ ಹಿಂದೆ ಇಂಡೋಸ್ಪಿರಿಟ್‌ ಮದ್ಯದ ಕಂಪನಿಯ ಪ್ರವರ್ತಕ ಸಮೀರ್ ಮಹಂದ್ರು, ಜನರಲ್ ಮ್ಯಾನೇಜರ್ ಪೆರ್ನೋಡ್ ರಿಕಾರ್ಡ್, ಬೆನೊಯ್ ಬಾಬು ಮತ್ತು ಅರಬಿಂದೋ ಫಾರ್ಮಾದ ನಿರ್ದೇಶಕ ಮತ್ತು ಪ್ರವರ್ತಕ ಪಿ ಶರತ್ ಚಂದ್ರ ರೆಡ್ಡಿ ಅವರನ್ನು ಬಂಧಿಸಿತ್ತು.

ಈ ಪ್ರಕರಣದಲ್ಲಿ ಇ.ಡಿ ಈವರೆಗೆ 169 ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ.

ಅಬಕಾರಿ ನೀತಿಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್‌ ದಾಖಲಿಸಿತ್ತು. ಇದರಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ. ಈ ಕುರಿತಂತೆ ಇ.ಡಿ ತನಿಖೆ ನಡೆಸುತ್ತಿದೆ.

ಪ್ರಕರಣ ದಾಖಲಾದ ನಂತರ ಸಿಸೋಡಿಯಾ ಮತ್ತು ದೆಹಲಿ ಸರ್ಕಾರದ ಕೆಲವು ಅಧಿಕಾರಿಗಳ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.