ADVERTISEMENT

ಸಫ್ದರ್‌ಜಂಗ್‌ ಆಸ್ಪತ್ರೆಯ ಇಬ್ಬರು ವೈದ್ಯೆಯರ ಮೇಲೆ ಹಲ್ಲೆ: ಬಂಧನ

ಕೋವಿಡ್‌–19 ಹಬ್ಬ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 20:24 IST
Last Updated 9 ಏಪ್ರಿಲ್ 2020, 20:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇಲ್ಲಿನ ಸಫ್ದರ್‌ಜಂಗ್‌ ಆಸ್ಪತ್ರೆಯ ಇಬ್ಬರು ವೈದ್ಯೆಯರ ಮೇಲೆ 42 ವರ್ಷದ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಕೃತ್ಯ ಬುಧವಾರ ರಾತ್ರಿ ನಡೆದಿದೆ.

ವೈದ್ಯರು ಕೊರೊನಾ ವೈರಸ್‌ ಹರಡುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ಮಾಡಿರುವ ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ದೆಹಲಿಯ ಗೌತಮ್‌ ನಗರದಲ್ಲಿರುವ ಆಸ್ಪತ್ರೆಯ ಸಮೀಪ ಈ ಕೃತ್ಯ ನಡೆದಿದೆ. ಈ ವೈದ್ಯರು ಸಹೋದರಿಯರಾಗಿದ್ದು, ಬಾಡಿಗೆ ಮನೆಯಲ್ಲಿ ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಹಣ್ಣುಗಳನ್ನು ಖರೀದಿಸಲು ಬಂದಾಗ ಈ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ಸಂಜೀವ್‌ ಶರ್ಮಾ ಎಂದು ಗುರುತಿಸಲಾಗಿದೆ.

ADVERTISEMENT

ಈ ಇಬ್ಬರು ವೈದ್ಯೆಯರನ್ನು ಕೋವಿಡ್‌–19 ರೋಗಿಗಳ ಚಿಕಿತ್ಸೆಗೆ ನಿಯೋಜಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

‘ವೈದ್ಯರು ಬೀದಿಯಲ್ಲಿ ತಿರುಗಾಡಬಾರದು. ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ನಿಮಗೆ ಅವಕಾಶ ಇಲ್ಲ. ವೈದ್ಯರಿಂದಲೇ ವೈರಸ್‌ ಹರಡುತ್ತಿದೆ ಎಂದು ಆರೋಪಿಸಿದ ಶರ್ಮಾ ಹಲ್ಲೆ ಮಾಡಿದ’ ಎಂದು ಸಫ್ದರ್‌ಜಂಗ್‌ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿಗಳ ಸಂಘಟನೆ ಅಧ್ಯಕ್ಷ ಡಾ. ಮನಿಷ್‌ ತಿಳಿಸಿದ್ದಾರೆ.

ವೈದ್ಯರು ಅಥವಾ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಎಲ್ಲ ಆಸ್ಪತ್ರೆಗಳಲ್ಲಿ ಭದ್ರತೆ ಪರಿಶೀಲಿಸಲಾಗಿದೆ ಎಂದು ದೆಹಲಿ ಪೊಲೀಸ್‌ ವಕ್ತಾರ ಎಂ.ಎಸ್‌. ರಂಧವಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.