ADVERTISEMENT

ದೆಹಲಿಯ ಅನಾಜ್‌ ಮಂಡಿಯಲ್ಲಿ ಬೆಂಕಿ ಅವಘಡ: 43 ಬಲಿ

ದೆಹಲಿಯ ಅನಾಜ್‌ ಮಂಡಿಯಲ್ಲಿ ಬೆಂಕಿ ಅವಘಡ

ಪಿಟಿಐ
Published 8 ಡಿಸೆಂಬರ್ 2019, 20:00 IST
Last Updated 8 ಡಿಸೆಂಬರ್ 2019, 20:00 IST
ಬೆಂಕಿ ಅವಘಡಕ್ಕೆ ಒಳಗಾದ ಕಟ್ಟಡದ ಬಳಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು –ಪಿಟಿಐ ಚಿತ್ರ
ಬೆಂಕಿ ಅವಘಡಕ್ಕೆ ಒಳಗಾದ ಕಟ್ಟಡದ ಬಳಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ: ಇಲ್ಲಿನ ಅನಾಜ್‌ ಮಂಡಿ ಪ್ರದೇಶದಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಭಾನುವಾರ ನಸುಕಿನಲ್ಲಿ ಬೆಂಕಿ ಅವಘಡ ಉಂಟಾಗಿದೆ. 43 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ದಳದ ಇಬ್ಬರು ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ.

ನಸುಕಿನ 5 ಗಂಟೆಗೆ ಕಟ್ಟಡದ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದಾಗಿ ಬೆಂಕಿ ಹತ್ತಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕಾರ್ಮಿಕರೆಲ್ಲರೂ ಗಾಢ ನಿದ್ದೆಯಲ್ಲಿದ್ದುದರಿಂದ ಉಸಿರುಗಟ್ಟಿ ಸತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

‘ಆಸ್ಪತ್ರೆಗೆ ತಲುಪುವ ಮುನ್ನವೇ 34 ಮಂದಿ ಪ್ರಾಣ ಕಳೆದುಕೊಂಡಿದ್ದರು. ಹೊಗೆಯಿಂದಾಗಿ ಉಸಿರಾಡಲು ಆಮ್ಲಜನಕ ಲಭಿಸದೆ ಅವರು ಪ್ರಾಣ ಬಿಟ್ಟಿದ್ದರು.ಕೆಲವು ಶರೀರಗಳು ಸುಟ್ಟಿದ್ದವು’ ಎಂದು ಎಲ್‌ಎನ್‌ಜೆಪಿ ಆಸ್ಪತ್ರೆಯ ವೈದ್ಯ ಡಾ.ಕಿಶೋರ್‌ ಸಿಂಗ್‌ ತಿಳಿಸಿದರು.

ಅವಘಡಕ್ಕೆ ಒಳಗಾದ ಕಟ್ಟಡದಲ್ಲಿ ಇದ್ದ ಕೆಲವು ತಯಾರಿಕಾ ಘಟಕಗಳು ಅನಧಿಕೃತ ಎಂದು ಹೇಳಲಾಗಿದೆ. ವಸತಿ ಪ್ರದೇಶದಲ್ಲಿ ನಿರ್ಮಿಸಿದ್ದ ಈ ಕಟ್ಟಡದಲ್ಲಿ ಗಾಳಿ–ಬೆಳಕಿನ ವ್ಯವಸ್ಥೆಯೂ ಇರಲಿಲ್ಲ. ಕೆಲವು ಕಿಟಕಿಗಳನ್ನು ತೆರೆಯಲು ಸಾಧ್ಯವಾಗದಂತೆ ಮುಚ್ಚಲಾಗಿತ್ತು. ಕಟ್ಟಡವು ಕಿರಿದಾದ ಓಣಿಯಲ್ಲಿ ಇದ್ದುದರಿಂದ ಅಗ್ನಿಶಾಮಕ ದಳದವರು ಅಲ್ಲಿಗೆ ತಲುಪಲು ಹರಸಾಹಸ ಪಡಬೇಕಾಯಿತು. ಹೀಗಿದ್ದರೂ ಅಗ್ನಿಶಾಮಕ ದಳದ ಸುಮಾರು 150 ಮಂದಿ ಸ್ಥಳಕ್ಕೆ ಧಾವಿಸಿ ಒಳಗಿದ್ದ 65 ಮಂದಿಯನ್ನು ರಕ್ಷಿಸಿದ್ದಾರೆ.

‘ಇಲ್ಲಿನ ಯಾವ ಕಟ್ಟಡವೂ ಅಗ್ನಿಶಾಮಕ ವಿಭಾಗದಿಂದ ನಿರಾಕ್ಷೇಪಣಾಪತ್ರ ಪಡೆದಿಲ್ಲ. ಸಿಬ್ಬಂದಿಯು ಕೆಲವು ಕಿಟಕಿಗಳನ್ನು ಒಡೆದು ಕಟ್ಟಡದ ಒಳಗೆ ಹೋಗಬೇಕಾಗಿ ಬಂದಿತು’ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದ್ದಾರೆ.

***

*ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್‌ ತನಿಖೆಗೆ ಆದೇಶಿಸಲಾಗಿದೆ. ವಾರದೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ

* ಮೃತಪಟ್ಟವರ ಕುಟುಂಬದವರಿಗೆ ದೆಹಲಿ ಸರ್ಕಾರದಿಂದ ತಲಾ ₹ 10 ಲಕ್ಷ, ಮತ್ತು ಗಾಯಗೊಂಡವರಿಗೆ
₹ 1 ಲಕ್ಷ ಪರಿಹಾರ ಘೋಷಣೆ

* ಮೃತರ ಕುಟುಂಬದವರಿಗೆ ಕೇಂದ್ರ ಸರ್ಕಾರದಿಂದ ತಲಾ ₹ 2 ಲಕ್ಷ ಹಾಗೂ ತೀವ್ರವಾಗಿ ಗಾಯಗೊಂಡವರಿಗೆ ತಲಾ ₹ 50,000 ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ

* ಕಟ್ಟಡದ ಮಾಲೀಕ ರೆಹಾನ್‌ ಹಾಗೂ ವ್ಯವಸ್ಥಾಪಕ ಫರ್ಕಾನ್‌ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.