ADVERTISEMENT

ಪಂಜಾಬ್ ಪ್ರವಾಹ: ₹13 ಸಾವಿರ ಕೋಟಿ ನಷ್ಟ; ದೆಹಲಿ ಸರ್ಕಾರದಿಂದ ₹5 ಕೋಟಿ ನೆರವು

ಪಿಟಿಐ
Published 10 ಸೆಪ್ಟೆಂಬರ್ 2025, 7:02 IST
Last Updated 10 ಸೆಪ್ಟೆಂಬರ್ 2025, 7:02 IST
   

ನವದೆಹಲಿ: ದೆಹಲಿ ಬಿಜೆಪಿ ಸರ್ಕಾರ, ಪ್ರವಾಹ ಪೀಡಿತ ಪಂಜಾಬ್‌ಗೆ ₹ 5 ಕೋಟಿ ನೆರವನ್ನು ಮಂಗಳವಾರ ಬಿಡುಗಡೆ ಮಾಡಿದೆ. ಹಾಗೆಯೇ, ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡುವುದಾಗಿ ಪಂಜಾಬ್‌ ಸಿಎಂ ಭಗವಂತ ಮಾನ್ ಅವರಿಗೆ ಭರವಸೆ ನೀಡಿದ್ದಾರೆ.

1988ರಿಂದ ಈಚೆಗೆ ಪಂಜಾಬ್‌ನಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, 52 ಮಂದಿ ಪ್ರಾಣ ಕಳೆದುಕೊಂಡು, ರಾಜ್ಯದಾದ್ಯಂತ ಸುಮಾರು 2,000 ಗ್ರಾಮಗಳ 4 ಲಕ್ಷ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಗುಪ್ತಾ, 'ಪಂಜಾಬ್‌ನಲ್ಲಿ ವಿನಾಶಕಾರಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ನೆರವಾಗುವುದಕ್ಕಾಗಿ ದೆಹಲಿ ಸರ್ಕಾರವು ಇಂದು ₹ 5 ಕೋಟಿ ನೆರವು ಬಿಡುಗಡೆ ಮಾಡಿದೆ' ಎಂದು ತಿಳಿಸಿದ್ದಾರೆ.

ADVERTISEMENT

ಪಂಜಾಬ್‌ ಸಿಎಂ ಮಾನ್‌ ಅವರಿಗೆ ಪತ್ರ ಬರೆದಿರುವುದಾಗಿಯೂ ಉಲ್ಲೇಖಿಸಿರುವ ಗುಪ್ತಾ, 'ಈ ಸಂಕಷ್ಟದ ಸಮಯದಲ್ಲಿ ದೆಹಲಿ ಸರ್ಕಾರ ಮತ್ತು ಪ್ರತಿಯೊಬ್ಬ ನಿವಾಸಿಯೂ ಪಂಜಾಬ್‌ ಜೊತೆ ಒಂದೇ ಕುಟುಂಬದವರಂತೆ ನಿಲ್ಲಲಿದೆ' ಎಂದು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯು ಪಂಜಾಬ್‌ನಲ್ಲಿ ಪ್ರವಾಹ ಉಲ್ಬಣಿಸುವಂತೆ ಮಾಡಿದೆ. ₹ 13,000 ಕೋಟಿಯಷ್ಟು ನಷ್ಟವಾಗಿರುವುದಾಗಿ ಸರ್ಕಾರ ಅಂದಾಜಿಸಿದೆ.

ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ಅಧಿಕಾರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.